ಕ್ಷಯ ರೋಗ ಪತ್ತೆ ಆಂದೋಲನಕ್ಕೆ ಆರೋಗ್ಯ ಇಲಾಖೆ ಸಹಕಾರಿ ನೀಡಿ: ಶಿಲ್ಪಾ.ಎಂ

ಬೀದರ, ಜು.19: ಜುಲೈ 17 ರಿಂದ ಅಗಸ್ಟ 02 ರವರೆಗೆ ಆರೋಗ್ಯ ಇಲಾಖೆಯಿಂದ ಬೀದರ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವ ಆಂದೋಲನ ಹಮ್ಮಿಕೊಂಡಿದ್ದು ಆದ್ದರಿಂದ ಬೀದರ ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಗೆ ಹಾಗೂ ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಶಿಲ್ಪಾ ಎಂ ಹೇಳಿದರು.

ಅವರು ಮಂಗಳವಾರ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಜುಲೈ 17 ರಿಂದ ಅಗಸ್ಟ 02 ರವರೆಗೆ ನಡೆಯಲಿರುವ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂಧೋಲನ ಕಾರ್ಯಕ್ರಮದ ಅಂಗವಾಗಿ ನಡೆದ ಜಿಲ್ಲಾ ಸಂಚಾಲನ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯು ಕ್ಷಯರೋಗ ಇರುವವರನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ವಿವಿಧ ತಂಡಗಳನ್ನು ಜಿಲ್ಲೆಯಾದ್ಯಂತ ರಚಿಸಿ ಆಂದೋಲನ ಕೈಗೋಳ್ಳುತ್ತಿದೆ ಇದರ ಜೊತೆಗೆ ಸಾರ್ವಜನಿಕರ ಸಹ ಕ್ಷಯ ರೋಗದ ಲಕ್ಷಣಗಳ ಕಂಡು ಬಂದಲ್ಲಿ ತಕ್ಷಣ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ಖಚಿತಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಶರಣಯ್ಯಾ ಸ್ವಾಮಿ ಮಾತನಾಡಿ, ನಮ್ಮ ಜಿಲ್ಲೆಯ ಜನಸಂಖ್ಯೆಯ ಜನಸಂಖ್ಯೆ ಶೇ.10 ರಷ್ಟು ಮತ್ತು ಜಿಲ್ಲೆಯ ಆಯ್ದ 216 ಗ್ರಾಮಗಳಲ್ಲಿ ಸದರಿ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಕಾರಣ ಹಲವಾರು ವರ್ಷಗಳಿಂದ ಕ್ಷಯರೋಗ ಪ್ರಕರಣಗಳು ಕಂಡುಬಾರದ ಗ್ರಾಮಗಳು ಮತ್ತು ಹೆಚ್ಚು ಕ್ಷಯರೋಗ ಪ್ರಕರಣಗಳು ಕಂಡುಬಂದ ಗ್ರಾಮಗಳನ್ನು ಆಯ್ದುಕೊಂಡು ಸಕ್ರಿಯ ಕ್ಷಯರೋಗ ಪ್ರಕರಣಗಳ ಪತ್ತೆ ಹಚ್ಚುವ ಆಂದೋಲನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 372615 ಜನಸಂಖ್ಯೆ ಇದ್ದು ಈ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನದಲ್ಲಿ 542 ತಂಡಗಳು, 1106 ಸದಸ್ಯರು, 289 ಮೇಲ್ವಿಚಾರಣಾ ಸಿಬ್ಬಂದಿಗಳು, 14 ಜಿಲ್ಲಾ ಸಿಬ್ಬಂದಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ, 187 ಕಾರ್ಯಕರ್ತರು ಹಾಗೂ 635 ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ತಂಡದಲ್ಲಿರುವ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಣಾ ಸಿಬ್ಬಂದಿಗಳು ಸಮಿಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು. ಸತತವಾಗಿ ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು, ದೇಹದ ತೂಕ ಕಡಿಮೆಯಾಗುವುದು, ಎದೆ ನೋವು, ಕಫದಲ್ಲಿ ರಕ್ತ ಬೀಳುವುದು ಇಂತಹ ಲಕ್ಷಣಗಳು ಇರುವವರು ತಪ್ಪದೆ ಕಡ್ಡಾಯವಾಗಿ ಸಮೀಕ್ಷೆಗೆ ಒಳಪಟ್ಟು ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕ್ಷಯರೋಗ ಖಚಿತ ಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿರುತ್ತದೆ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ನಮ್ಮ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿ ಡಾ.ರತಿಕಾಂತ.ವಿ.ಸ್ವಾಮಿ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಅಂತರ ಇಲಾಖೆಯ ಅಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು.