ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ: ಸಚಿವ ಪ್ರಭು ಚವ್ಹಾಣ ಮನವಿ

ಬೀದರ:ನ.17:ಸರ್ಕಾರವು ರಾಜ್ಯದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆಗೊಳಿಸಲು ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.

ಪ್ರಧಾನಮಂತ್ರಿ ಕ್ಷಯರೋಗ ಮುಕ್ತ ಭಾರತ ಅಭಿಯಾನದ ನಿಮಿತ್ತ ಔರಾದ(ಬಿ) ತಾಲ್ಲೂಕಿನ ವನಮಾಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನವೆಂಬರ್ 16ರಂದು ಆಹಾರ ಮತ್ತು ಔಷಧಿ ಕಿಟ್ ವಿತರಿಸಿ ಮಾತನಾಡಿದರು.

ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕ್ಷಯ ರೋಗದಿಂದ ವಿಮುಕ್ತಿ ಹೊಂದಲು ಸಾಧ್ಯವಿದೆ. ರೋಗ ಲಕ್ಷಣಗಳು ಕಾಣಿಸಿದಲ್ಲಿ ವಿಳಂಬ ಮಾಡದೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಜಿಲ್ಲಾ ಕ್ಷಯ ನಿರ್ಮೂಲನ ಅಧಿಕಾರಿ ಡಾ.ಶರಣಯ್ಯ ಸ್ವಾಮಿ, ಔರಾದ ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿದೇವಿ, ಡಾ.ಅನೀಲ ಗಡ್ಡೆ, ಸುನೀಲ ಕಸ್ತೂರೆ, ಸಂಗಮೇಶ ಕಾಡ್ಲೆ, ಮುಖಂಡರಾದ ಶಿವಾಜಿರಾವ ಕಾಳೆ, ಸುರೇಶ ಭೋಸ್ಲೆ, ವಸಂತ ಬಿರಾದಾರ, ಪ್ರತೀಕ್ ಚವ್ಹಾಣ, ದೊಂಡಿಭಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಹಣಮಂತ ಸುರನಾರ ಹಾಗೂ ಇತರರು ಉಪಸ್ಥಿತರಿದ್ದರು.