ಕ್ಷಯ ರೋಗ ನಿರ್ಮೂಲನೆಗೆ ಪಣತೊಡಲು ಕರೆ

ಕೋಲಾರ,ಮಾ.೨೫: ವಿಶ್ವಸಂಸ್ಥೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ೨೦೨೫ ನೇ ವರ್ಷಕ್ಕೆ ಕ್ಷಯ ರೋಗ ಮುಕ್ತ ಭಾರತವಾನ್ನಾಗಿಸೋಣ ಎಂಬ ಗುರಿಯನ್ನು ಹೊಂದಿದ್ದು, ಕ್ಷಯ ರೋಗ ನಿರ್ಮೂಲನೆಗೆ ಪಣತೊಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ಎನ್.ಎಂ.ನಾಗರಾಜ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯ ರೋಗವನ್ನು ಪ್ರಾಥಮಿಕ ಹಂತದಲ್ಲಿ ನಿರ್ಮೂಲನೆ ಮಾಡಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜನರಲ್ಲಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಬೇಕು. ಸಮುದಾಯಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ಖಚಿತಗೊಂಡ ನಂತರ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಾಗರೀಕರು ಕ್ಷಯ ರೋಗಿಯ ಬಗ್ಗೆ ಯಾವುದೇ ಬೇದಭಾವ ಮಾಡಬಾರದು. ಕುಟುಂಬಸ್ಥರು ರೋಗಿಯನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು. ಪೌಷ್ಠಿಕ ಆಹಾರ ನೀಡಿ ಆರೈಕೆ ಮಾಡಿದರೆ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು. ಮುಂಜಾಗೃತಾ ಕ್ರಮಗಳನ್ನು ಪಾಲಿಸುವುದರಿಂದ ರೋಗ ಬೇರೊಬ್ಬರಿಗೆ ಹರಡದಂತೆ ತಡೆಯಬಹುದು. ಸಮುದಾಯಗಳು ಕ್ಷಯ ರೋಗದ ವಿರುದ್ಧ ಹೋರಾಡಲು ಅವರಲ್ಲಿ ಅರಿವು ಮೂಡಿಸಲು ಈ ವರ್ಷ ಸಮುದಾಯ ಸಹಭಾಗಿತ್ವ ಎಂಬ ಕಾರ್ಯಕ್ರಮವನ್ನು ಚನ್ನಸಂದ್ರ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಮುದಾಯದಲ್ಲಿ ನಾಗರಿಕರು ಮಾಸ್ಕ್ ಬಳಸುವುದರಿಂದ ಆನೇಕ ಕಾಯಿಲೆಗಳನ್ನು ತಡೆಯಬಹುದು. ಆನೇಕ ರೋಗಗಳಿಗೆ ಮಾಸ್ಕ್ ರಕ್ಷಾಕವಚವಾಗಿದೆ. ಸಮುದಾಯ ಮತ್ತು ಎಲ್ಲಾ ಕುಟುಂಬ ಸದಸ್ಯರು ಕ್ಷಯ ರೋಗ ಮತ್ತು ಕೋವಿಡ್ ನಿಯಂತ್ರಣದ ಬಗ್ಗೆ ಅರಿವು ಜಾಗೃತಿ ಹೊಂದಿರಬೇಕು. ಪ್ರತಿಯೊಬ್ಬರು ಕ್ಷಯ ರೋಗದ ವಿರುದ್ಧ ಪಣತೊಟ್ಟು ಹೋರಾಟ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳಾದ ಡಾ. ಜಗದೀಶ್ ಅವರು ಮಾತನಾಡಿ, ಕ್ಷಯ ರೋಗವು ಸುಮಾರು ೪೦೦೦ ವರ್ಷಗಳ ಇತಿಹಾಸವುಳ್ಳ ಖಾಯಿಲೆಯಾಗಿದೆ. ಭಾರತದಲ್ಲಿ ಪ್ರತಿ ವರ್ಷ ೧ ಲಕ್ಷ ಜನಸಂಖ್ಯೆಯಲ್ಲಿ ೧೮೦ ಕ್ಷಯರೋಗಿಗಳು ಇರುತ್ತಾರೆ ಎಂದು ಅಂದಾಜಿಸಲಾಗಿದೆ. ಕ್ಷಯರೋಗಕ್ಕೆ ಕಾರಣವಾದ ಮೈಕೋ ಬ್ಯಾಕ್ಟೀರಿಯಂ ಟುಬೆರ್‍ಕುಲೆ ರೋಗಾಣುವನ್ನು ರಾಬರ್ಟ್ ಕಾಕ್ ಎಂಬ ವಿಜ್ಞಾನಿ ಮಾರ್ಚ್ ೨೪, ೧೮೮೨ ರಂದು ಕಂಡುಹಿಡಿದರು. ಇದರಿಂದ ಮಾರಕವಾಗಿದ್ದ ಕ್ಷಯರೋಗದ ಚಿಕಿತ್ಸೆಗೆ ಅತ್ಯಂತ ಉಪಕಾರಿಯಾಯಿತು. ಇದರ ನೆನಪಿಗಾಗಿ ಇಡೀ ವಿಶ್ವದಲ್ಲಿ ಪ್ರತಿ ವರ್ಷ ಮಾರ್ಚ್ ೨೪ ರಂದು ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸೆಕರಾದ ಡಾ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಚಾರಿಣಿ, ಡಾ.ಕಮಲ, ಡಾ.ರವಿಕುಮಾರ್, ಡಾ.ಚಂದನ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.