ಕ್ಷಯ ರೋಗ ನಿಯಂತ್ರಣಕ್ಕೆ ಸಹಭಾಗಿತ್ವ ಅಗತ್ಯ

ಕೋಲಾರ,ಮಾ.೨೫: ಕ್ಷಯರೋಗ ಅತ್ಯಂತ ಪುರಾತನ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇಂದಿಗೂ ಸಮಾಜದಲ್ಲಿ ಸಾಮಾಜಿಕ ಪಿಡುಗು ಎಂದು ಭಾವಿಸುವುದು ವಿಷಾದನೀಯ. ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಅಧಿಕಾರಿಗಳಾದ ಆರ್.ಸತ್ಯನಾರಾಯಣಗೌಡ ತಿಳಿಸಿದರು.
ಕೋಲಾರ ತಾಲ್ಲೂಕಿನ ಚನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉರಟಿ ಅಗ್ರಹಾರ, ಕಮಂಡಲ್ಲಿ, ಬಂಡಳ್ಳಿ, ಗ್ರಾಮಗಳ ಸ್ತ್ರೀಶಕ್ತಿ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಕ್ಷಯ ರೋಗದ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷಯರೋಗವನ್ನು ಶೀಘ್ರ ಪತ್ತೆ ಹಚ್ಚಿ ಹಾಗೂ ಪೂರ್ಣ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣ ಪಡೆಯಬಹುದಾದ ಕಾಯಿಲೆಯಾಗುತ್ತದೆ. ಕಾಯಿಲೆ ಲಕ್ಷಣಗಳಾದ ಎರಡು ವಾರಕ್ಕಿಂತ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು. ಇದು ಶ್ವಾಸಕೋಶ ಕ್ಷಯದ ಲಕ್ಷಣವಾಗಿರುತ್ತದೆ. ಕೂದಲು ಹಾಗೂ ಉಗುರು ಹೊರತು ಪಡಿಸಿ, ಬೇರೆಲ್ಲ ಅಂಗಾಂಗಗಳಿಗೆ ಕ್ಷಯ ರೋಗ ಬರಬಹುದು ಎಂದರು. ಕಫ ಪರೀಕ್ಷೆ, ಬಯಾಪ್ಸಿ ಹಾಗೂ ಸಿಬಿನೆಟ್ ಪರೀಕ್ಷೆಗಳ ಮೂಲಕ ಕ್ಷಯ ರೋಗವನ್ನು ಪತ್ತೆಹಚ್ಚಬಹುದು ಎಂದರು.
ಸಿಬಿನೆಟ್ ಯಂತ್ರವು ಎಸ್.ಎನ್.ಆರ್ ಆಸ್ಪತ್ರೆಯ ಆವರಣದಲ್ಲಿ ಕ್ಷಯರೋಗ ಪತ್ತೆ ಪ್ರಯೋಗಾಲಯದಲ್ಲಿದ್ದು, ಒಂದು ಟಿಬಿ ಬ್ಯಾಕ್ಟೀರಿಯ ಇದ್ದರೂ ಸಹ ಪತ್ತೆ ಹಚ್ಚುವ ಸಾಧನವಾಗಿದೆ. ಇದರಿಂದ ರೋಗಿಗಳಿಗೆ ಬಹಳ ಅನುಕೂಲವಾಗಿದೆ. ಸರ್ಕಾರವು ರೋಗಿಗಳಿಗೆ ಪೋಷಕಾಂಶ ಆಹಾರಸೇವನೆಗೆ ರೋಗಿಯ ಬ್ಯಾಂಕ್ ಖಾತೆಗೆ ಮಾಸಿಕ ೫೦೦ ರೂಪಾಯಿಗಳನ್ನು ರೋಗಿ ಚಿಕಿತ್ಸೆ ಪಡೆಯುವವರೆಗೂ ನೀಡಲಾಗುತ್ತಿದೆ. ರೋಗಿಗಳಿಗೆ ಮನೋಸ್ಥೈರ್ಯ ತುಂಬುವ ಸಲುವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಹಾಗೂ ಮಾತ್ರೆ ವಿತರಕರ ಸಭೆ ಕರೆದು ಹಳೇ ರೋಗಿಗಳು ಹೊಸ ರೋಗಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿಸುವುದು, ರೋಗಿಗಳಿಗೆ ವೈಯಕ್ತಿಕ ಸ್ವಚ್ಛತೆಕಾಪಾಡಿಕೊಳ್ಳುವಂತೆ ತಿಳಿಸಲಾಗುತ್ತಿದೆ ಎಂದು ತಿಳಿಸಿದರು. ಟಿಬಿ ಮುಕ್ತ ಸಮಾಜದೆಡೆಗೆ ಸಮುದಾಯದ ಸಹಭಾಗಿತ್ವ ಎಂಬ ಘೋಷಣೆಯೊಂದಿಗೆ ಮಾರ್ಚ್ ೨೪ರಂದು ಕ್ಷಯರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಚನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಟಿಬಿ ಮುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಮಧುಕೇಶ್, ಖಾಸಗಿ ಆಸ್ಪತ್ರೆ ಸಂಯೋಜಕರಾದ ಅಂಬರೀಶ್, ರವಿಕುಮಾರ್, ರಾಜೇಶ್, ರಾಮಪ್ಪ ಲಕ್ಷ್ಮಣ ನಾಗಮಣಿ, ಕಲ್ಪನಾ ಹಾಗೂ ಶಿಕ್ಷಕರಾದ ಶೈಲಜಾ, ಚೆನ್ನಪ್ಪ ಹಾಜರಿದ್ದರು.