ಕ್ಷಯ ಮುಕ್ತ ಭಾರತಕ್ಕೆ ಸಂಕಲ್ಪ ಮಾಡೋಣ: ಶಿವಲಿಂಗೇಗೌಡ

ಅರಸೀಕೆರೆ, ಜು. ೨೯- ಕೇಂದ್ರ ಸರ್ಕಾರ ೨೦೨೫ರಲ್ಲಿ ಕ್ಷಯ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಕ್ಷಯರೋಗ ನಿಯಂತ್ರಣಕ್ಕಾಗಿ ದೇಶ ವ್ಯಾಪ್ತಿಯಲ್ಲಿ ಬೃಹತ್ ಆಂದೋಲನ ಕೈಗೊಂಡಿದೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ತಿಳಿಸಿದರು.
ನಗರದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷಯ ರೋಗದ ಬಗ್ಗೆ ಆಂದೋಲನ ಹಾಗೂ ಕೊರೊನಾ ಬೂಸ್ಟರ್ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ದುಶ್ಚಟಗಳು ಹಾಗೂ ಇಂದಿನ ಆಹಾರ ಪದ್ಧತಿಯಿಂದ ಮನುಷ್ಯನ ದೇಹದಲ್ಲಿ ಅನೇಕ ಕಾಯಿಲೆಗಳು ಉಂಟಾಗುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುರೇಶ್ ಮಾತನಾಡಿ, ಇತ್ತೀಚಿನ ಆಧುನಿಕ ಶೈಲಿಯ ಆಹಾರ ಪದ್ಧತಿ ಹಾಗೂ ಮಾದಕ ವಸ್ತುಗಳ ದುಶ್ಚಟಗಳ ಸೇವನೆ ಪರಿಣಾಮ ಕ್ಷಯರೋಗ ಸೇರಿದಂತೆ ಅನೇಕ ರೋಗ ರುಜಿನಗಳು ಮನುಷ್ಯನ ದೇಹವನ್ನು ಪ್ರವೇಶಿಸುತ್ತಿವೆ. ವಿಪರೀತ ಕೆಮ್ಮು, ಎದೆನೋವು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆ ಆಗುವುದು, ನಿಲ್ಲದ ಜ್ವರ ಬರುವುದು, ರೋಗದ ಲಕ್ಷಣಗಳು, ಸಕಾಲದಲ್ಲಿ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯಿರಿ. ಇದರಿಂದ ರೋಗ ಹರಡದಂತೆ ತಡೆಯಬಹುದು. ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಿರಿ. ಇದರಿಂದ ಕ್ಷಯರೋಗ ನಿಯಂತ್ರಿಸಲು ಸಾಧ್ಯ ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ತಿಮ್ಮರಾಜು ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ೧೮ರಿಂದ ೫೯ರ ವಯಸ್ಸಿನವರೆಗೆ ಎರಡನೇ ಡೋಸ್ ಲಸಿಕೆ ಪಡೆದು ಆರು ತಿಂಗಳು ಕಳೆದವರಿಗೆ ಉಚಿತವಾಗಿ ಬೂಸ್ಟರ್ ಲಸಿಕೆ ನೀಡಲು ೭೫ ದಿನಗಳ ಅಭಿಯಾನವನ್ನು ಕೈಗೊಂಡಿದೆ. ಪ್ರತಿಯೊಬ್ಬರು ತಪ್ಪದೇ ಬೂಸ್ಟರ್ ಲಸಿಕೆ ಪಡೆಯುವ ಮೂಲಕ ಕೊರೊನಾ ಸೋಂಕಿನ ನಾಲ್ಕನೇ ಅಲೆ ನಿಯಂತ್ರಿಸಲು ತಾಲ್ಲೂಕಿನ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಕ್ಷಯರೋಗ ಪ್ರಕರಣಗಳು ಪತ್ತೆಯಾಗಿದೆ. ಆದ ಕಾರಣ ರೋಗ ಲಕ್ಷಣ ಕಂಡು ಬಂದ ವ್ಯಕ್ತಿಗಳು ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇತ್ತೀಚಿನ ಮಳೆಯಿಂದ ಸೊಳ್ಳೆಗಳು ವ್ಯಾಪಕವಾಗಿ ಹರಡುತ್ತಿರುವ ಕಾರಣ ಡೆಂಗ್ಯೂ, ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗುತ್ತಿವೆ. ರೋಗ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷಯರೋಗ ನಿಯಂತ್ರಣ ವಿಭಾಗದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಗುರುರಾಜು, ಡಾ.ರಂಜಿತ, ಶಿರಸ್ತೇದಾರ್ ಸೋಮಶೇಖರ್, ರಕ್ಷಾ ಸಮಿತಿ ಸದಸ್ಯ ರಾಘವೇಂದ್ರ, ಆರೋಗ್ಯ ಇಲಾಖೆ ನಿರೀಕ್ಷಕ ಜಮೀರ್ ಪಾಷಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.