ಕ್ಷಯ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಕೈಜೋಡಿಸಿ: ಶೇಖ್ ತನ್ವೀರ್

ಮಂಡ್ಯ.ಜೂ.24:- ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಿ, ಜಿಲ್ಲೆಯನ್ನು ಕ್ಷಯ ರೋಗವನ್ನು ಕೊನೆಗಾಣಿಸಲು ಗಣನೀಯವಾದ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ರವರು ತಿಳಿಸಿದರು.
ಅವರು ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಟಿಬಿ ಮುಕ್ತ ಗ್ರಾಮ ಪಂಚಾಯಿತಿ ಸಂಬಂಧ ಸಭೆ ನಡೆಸಿ ಮಾತನಾಡಿದರು.
ಭಾರತ ಸರ್ಕಾರ 2025 ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡುವ ಗುರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಯೋಜನೆಗಳನ್ನು ರೂಪಿಸಿ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷಯ ರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖ ರಾಗಬಹುದು. ಕ್ಷಯ ರೋಗದ ಬಗ್ಗೆ ಸಾರ್ವಜನಿಕರು ಇರುವ ಭಯವನ್ನು ದೂರ ಮಾಡಿಕೊಂಡು ವೈದ್ಯರಲ್ಲಿ ಮುಕ್ತವಾಗಿ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟಾರೆ 700 ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು ಅವರಿಗೆ ಸರ್ಕಾರದಿಂದ ಉಚಿತವಾಗಿ ಟ್ರೀಟ್ಮೆಂಟ್ ನೀಡಲಾಗುತ್ತದೆ ಹಾಗೆಯೇ ಆರು ತಿಂಗಳ ಕಾಲ ಮಾತ್ರೆ ಸೇವನೆಯು ಅಗತ್ಯವಾಗಿರುತ್ತದೆ ಎಂದು ಆಊಔ ಡಾ. ಧನಂಜಯ್ ರವರು ಮಾತನಾಡಿದರು.
ಕ್ಷಯರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿ ಗ್ರಾಮಗಳಲ್ಲೂ ಆಂದೋಲನಾದ ರೀತಿ ಕಾರ್ಯಕ್ರಮಗಳನ್ನು ಮಾಡಬೇಕು ಆಗ ಮಾತ್ರ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಡಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಆಡಳಿತ ಎಂ ಬಾಬು, ಉಪಕಾರ್ಯದರ್ಶಿ ಅಭಿವೃದ್ಧಿ ಸಂಜೀವಪ್ಪ, ಯೋಜನ ನಿರ್ದೇಶಕ ಧನರಾಜ್ ಬೋರಳೆ, ಕಾರ್ಯಪಾಲಕ ಅಭಿಯಂತರರು ಕುಡಿಯುವ ನೀರು ತಮ್ಮಣ್ಣ, ಸರ್ವೇಕ್ಷಣಾಧಿಕಾರಿ ಡಾ. ಸಂಜಯ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಎಂ.ಎನ್.ಆಶಾಲತಾ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಯ ಎಲ್ಲಾ ಇಓ ಮತ್ತು ಪಿಡಿಓ ಗಳು ಹಾಜರಿದ್ದರು.