ಕ್ಷಯ: ಬೇಡ ಭಯ, ನಿಯಮಿತವಾಗಿ ಬಹು ಔಷಧ ಸೇವನೆಯಿಂದ ರೋಗ ಗುಣ

ಚಿತ್ರದುರ್ಗ.ಮಾ.೧೫; ಕ್ಷಯ ರೋಗದ ಬಗ್ಗೆ ಭಯ ಬೇಡ. ನಿಯಮಿತವಾಗಿ ಬಹು ಔಷಧ ಸೇವನೆಯಿಂದ ರೋಗ ಗುಣವಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಓ.ಸುಧಾ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮದಕರಿಪುರ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಆರೋಗ್ಯ ಇಲಾಖೆ, ಕೆಹೆಚ್‍ಪಿಟಿ ಟ್ರಸ್ಟ್ ಸಹಯೋಗದೊಂದಿಗೆ “ಕ್ಷಯರೋಗ ನಿರ್ಮೂಲನೆಯಲ್ಲಿ ಸಮುದಾಯದ ಸಹಭಾಗಿತ್ವ’ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖ್ಯಸ್ಥರೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  ಕ್ಷಯರೋಗ ನಿರ್ಮೂಲನೆ ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಸಾಧ್ಯ. ಈಗಾಗಲೇ ಗ್ರಾಮ ಪಂಚಾಯತಿ ಅಮೃತ ಆರೋಗ್ಯ ಅಭಿಯಾನದಲ್ಲಿ ತಮಗೆಲ್ಲಾ ತರಬೇತಿ ನೀಡಲಾಗಿದೆ. ಅದರಂತೆ ಹಳ್ಳಿಯ ಪ್ರತಿ ವಾರ್ಡ್‍ನಲ್ಲಿ ಆರೋಗ್ಯ ಅಭಿಯಾನ ನಡೆಸಿ, ವಿಶೇಷವಾಗಿ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ತಪಾಸಣೆ, ವಿಶೇಷ ಪರೀಕ್ಷೆ ನಡೆಸಿ ಕ್ಷಯರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ಹೋಗಲಾಡಿಸಿ ಎಂದರು.  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ (ಕ್ಷಯರೋಗ ವಿಭಾಗ) ಮಾರುತಿಪ್ರಸಾದ್ ಮಾತನಾಡಿ, ಕ್ಷಯರೋಗ ಹರಡುವ ವಿಧಾನ, ಕ್ಷಯರೋಗದ ಚಿಕಿತ್ಸಾ ವಿಧಾನ, ಕ್ಷಯರೋಗ ಪರೀಕ್ಷಾ ವಿಧಾನ, ನಿಕ್ಷಯಮಿತ್ರ ಪೆÇೀಷಣ್ ಅಭಿಯಾದಡಿ ರೋಗಿಗಳಿಗೆ ಸಿಗುವ ಆರ್ಥಿಕ ಸೌಲತ್ತುಗಳ ಬಗ್ಗೆ ತಿಳಿಸಿದರು.