
ರಾಯಚೂರು,ಮಾ.೨೪- ಕ್ಷಯರೋಗ ಮುಕ್ತ ಜಿಲ್ಲೆಗೆ ಗುರಿ ಇಟ್ಟುಕೊಳ್ಳಲಾಗಿದೆ. ಇದನ್ನು ನಿವಾರಣೆಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುರೇಂದ್ರ ಬಾಬು ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ವಿಭಾಗ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಆಟೋಜಾಥಾಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದರು. ಕ್ಷಯರೋಗವು ಅನೇಕ ವರ್ಷಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದ್ದು ಒಟ್ಟಾರೆ ದೇಶದಲ್ಲಿ ಒಂದು ಲಕ್ಷ ಜನರಲ್ಲಿ ೧೯೫ ಜನರಿಗೆ ಈ ರೋಗ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಕ್ಷಯ ರೋಗ ವಂಶವಾಹಿನಿ ರೋಗ ಅಲ್ಲ. ಇದು ಕಲುಷಿತ ಗಾಳಿಯಿಂದ ಉಂಟಾಗುತ್ತದೆ. ಕಾಯಿಲೆ ಬಂದ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಇತರ ರಿಗೂ ಹರಡುವ ಸಾಧ್ಯತೆ ಇರುತ್ತದೆ. ಎರಡು ವಾರಕ್ಕೂ ಹೆಚ್ಚು ಅವಧಿ ಕೆಮ್ಮು, ಸಂಜೆ ಸಮಯದಲ್ಲಿ ಮಾತ್ರವೇ ಜ್ವರ ಕಾಣಿಸಿಕೊಳ್ಳುವುದು, ಊಟ ಸೇರದಿರುವುದು, ಕೆಮ್ಮಿದಾಗ ರಕ್ತ ಬರುವುದು ರೋಗದ ಲಕ್ಷಣ ಎಂದು ವಿವರಿಸಿದರು.
ರೋಗದಿಂದ ಹೋಗಲಾಡಿಸಲು ಜಿಲ್ಲೆಯಲ್ಲಿ ಚಿಕೆತ್ಸೆ ಕೇಂದ್ರಗಳು ಲಭ್ಯವಿದೆ ಆತಂಕ ಪಡುವ ಅಗತ್ಯವಿಲ್ಲ ಎಂದರು.ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೆ ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಕ್ಷಯ ರೋಗವು ಚಿಕಿತ್ಸೆಯ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ.
ಕ್ಷಯ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಿ, ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸಂದೇಶ ನೀಡಿದರು.
ಸಂದರ್ಭದಲ್ಲಿ ಅರೋಗ್ಯ ಅಧಿಕಾರಿಗಳು, ಸಿಬ್ಬಂದಿಗಳು ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು