ಕ್ಷಯರೋಗ ಮುಕ್ತ ಜಿಲ್ಲೆಗೆ ಎಲ್ಲರ ಸಹಕಾರ ಅಗತ್ಯ

ಕಲಬುರಗಿ.ಆ.4: ಕ್ಷಯರೋಗ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಟ್ಯೂಬರ್ ಕ್ಯೂಲೋಸಿಸ್ ಎಂಬ ಬ್ಯಾಕ್ಟೇರಿಯಾದಿಂದ ಬರುತ್ತದೆ. ಇದರ ಸಂಪೂರ್ಣ ನಿರ್ಮೂಲನೆಗೆ ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಸರ್ಕಾರ, ಆರೋಗ್ಯ ಇಲಾಖೆ 2025ರ ವೇಳೆಗೆ ಕ್ಷಯರೋಗ ನಿರ್ಮಲನೆಯ ಗುರಿಯನ್ನು ಹೊಂದಿ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ನೀಡಿದರೆ ಕ್ಷಯರೋಗ ಮುಕ್ತ ಜಿಲ್ಲೆಯಾಗಲು ಸಾಧ್ಯವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರನ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಕ್ಷಯರೋಗ ನಿರ್ಮಲನಾ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎರಡು ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜ್ವರ ಬರುವುದು ಹಾಗೂ ಬೆವರುವುದು, ತೂಕದ ಇಳಿಕೆ, ಹಸಿವಾಗದಿರುವದು ಕ್ಷಯರೋಗದ ಲಕ್ಷಣಳಾಗಿವೆ. ಇವುಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು, ಕಾಯಿಲೆಯಿಂದ ಮುಕ್ತಿ ಹೊಂದಬೇಕು. ಕ್ಷಯ ಸಂಪೂರ್ಣವಾಗಿ ಗುಣಮುಖವಾಗುವಂತಹ ರೋಗವಾಗಿದೆ ಎಂದರು.
ತಂಬಾಕು, ಮದ್ಯಪಾನ, ಧೂಮಪಾನ ಸೇವನೆ ಮಾಡುವವರ ಶ್ವಾಸÀಕೋಶ ದುರ್ಬಲವಾಗಿರುವುದರಿಂದ ಕ್ಷಯರೋಗವು ಹೆಚ್ಚಿನ ಸಮಸ್ಯ ಉಂಟುಮಾಡುತ್ತದೆ. ಇದು ರೋಗಿಯು ಸೀನಿದಾಗ ಮತ್ತು ಕೆಮ್ಮಿದಾಗ ಗಾಳಿಯ ಮೂಲಕ ಹರಡುತ್ತದೆ. ಮುಟ್ಟುವುದರಿಂದ, ಕೈ ಕುಲುಕುವುದರಿಂದ ಬರುವುದಿಲ್ಲ. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ಹಸಿರು ತರಕಾರಿ, ಹಾಲು, ಹಣ್ಣು, ಮೊಟ್ಟೆ, ಮೀನು ಸೇವನೆ ಮಾಡಬೇಕು. ಎಣ್ಣೆಯಲ್ಲಿ ಬೇಯಿಸಿದ, ಕರಿದ ಆಹಾರಗಳ ಸೇವನೆ ಬೇಡ ಎಂದು ರೋಗಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಸುನಿತಾ ಎಸ್.ಜಮಾದಾರ, ಶರಣು ಜಮಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಸಚಿನ್ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮುಂತಾದವರಿದ್ದರು.