ಕ್ಷಯರೋಗ ಮುಕ್ತ ಆನೆಗೊಂದಿ ಗ್ರಾಮಕ್ಕಾಗಿ ಜಾಗೃತಿ ಕಾರ್ಯಕ್ರಮ

ಗಂಗಾವತಿ ನ 12 : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಕಾರ್ಯಕ್ರಮಕ್ಕೆ ಪಿಡಿಒ ಕೆ.ಕೃಷ್ಣಪ್ಪ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಟಿವಿ ಒಂದು ಸಾಂಕ್ರಾಮಿಕ ಖಾಯಿಲೆ. ಸರಿಯಾದ ಪ್ರಮಾಣದಲ್ಲಿ ಔಷಧಿ ತೆಗೆದುಕೊಂಡಲ್ಲಿ ಟಿವಿ ಗುಣಪಡಿಸಬಹುದು ಎಂದರು.

ಆನೆಗೊಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಮೌನೇಶ ಮಾತನಾಡಿ, ಕ್ಷಯರೋಗವು
ಒಬ್ಬರಿಂದ ಇನ್ನೊಬ್ಬರಿಗೆ ಕೆಮ್ಮುವುದರ ಮೂಲಕ ಗಾಳಿಯಿಂದ ಹರಡುತ್ತದೆ. ನಿರಂತರವಾಗಿ ಕೆಮ್ಮು, ತೂಕ ಇಳಿಕೆ, ಎದೆ ನೋವು, ಸುಸ್ತು, ರಾತ್ರಿ ಬೆವರು, ಜ್ವರ ಕಫದಲ್ಲಿ ರಕ್ತ, ಹಸಿವಾಗದಿರುವುದು ಇವು ಕ್ಷಯ ರೋಗದ ಲಕ್ಷಣವಾಗಿದ್ದು, ಇಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಟಿ.ವಿ. ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಗಳಿಗೂ ಪೌಷ್ಟಿಕ ಆಹಾರ ಸೇವನೆಗೆ ಸಹಾಯವಾಗಲು ಪ್ರತಿ ತಿಂಗಳು ಸರ್ಕಾರ ರೂ.500 ಸಹಾಯಧನ ಸಹ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರಾದ ಹಾಲಮ್ಮ, ದೀಲ, ಆಶಾ ಕಾರ್ಯಕರ್ತೆ ಯರಾದ ಕಾಶಿಬೀ, ಜಯಾ, ಜೋಸೆಫನು ಸೇರಿದಂತೆ ಇತರರಿದ್ದರು.