ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

ಲಕ್ಷ್ಮೇಶ್ವರ,ಜು.28: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ನಿಯಂತ್ರಣ ವಿಭಾಗದಿಂದ ಕ್ಷಯರೋಗ ಪತ್ತೆ ಆಂದೋಲನಕ್ಕೆ ಶಾಸಕ ರಾಮಣ್ಣ ಲಮಾಣಿ ಅವರು ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕ್ಷಯ ರೋಗ ಸತತ ಚಿಕಿತ್ಸೆಯಿಂದ ಗುಣಪಡಿಸುವ ರೋಗವಾಗಿದ್ದು ಸರ್ಕಾರ ಎಲ್ಲಾ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದು ಸಾರ್ವಜನಿಕರು ಸಾಧ್ಯವಾದಷ್ಟು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದ, ನಗರ ಪ್ರದೇಶದ, ಪಟ್ಟಣ ಪ್ರದೇಶದ ಬಡ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ತಹಶೀಲ್ದಾರ್ ಪರುಶುರಾಮ ಸತ್ತಿಗೇರಿ ಅವರು ಮಾತನಾಡಿ ಟಿಬಿ ಎಂದು ಕರೆಯಲ್ಪಡುವ ಕ್ಷಯ ರೋಗ ಬ್ಯಾಕ್ಟೀರಿಯಾದಿಂದ ಬರುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಶ್ವಾಸಕೋಶದ ರೋಗಗಳು ಬರಲು ಕಾರಣವಾಗುತ್ತದೆ. ಆದ್ದರಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಸ್ವಯಂ ಪ್ರೇರಣೆಯಿಂದ ನಿಷೇಧಿಸಬೇಕು ಎಂದರು.
ಕ್ಷಯ ರೋಗ ನಿಯಂತ್ರಣ ಅಧಿಕಾರಿ ಅವರು ಮಾತನಾಡಿ ಒಂದು ತಿಂಗಳ ಕಾಲ ಕ್ಷಯ ರೋಗ ಪತ್ತೆ ಆಂದೋಲನ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಿಂದ ಹಮ್ಮಿಕೊಂಡಿದ್ದು ಸತತ ಕೆಮ್ಮು, ಕಫ, ಜ್ವರ ಇದ್ದರೆ ಅಂತವರು ಸನಿಹದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ಆಸ್ಪತ್ರೆ ವೈದ್ಯಾಧಿಕಾರಿ ಶ್ರೀಕಾಂತ್ ಖಾಟೆವಾಲೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.