ಕ್ಷಯರೋಗ ನಿರ್ಲಕ್ಷ್ಯವಹಿಸದೆ ಮುನ್ನೆಚ್ಚರಿಕೆ ಕೈಗೊಳ್ಳಿ

ಕಲಬುರಗಿ,ಮಾ.23:ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಉಂಟಾಗುವ ಜ್ವರ, ತೂಕದ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವ ಲಕ್ಷಣಗಳು ಕ್ಷಯರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಸಲಹೆ ನೀಡಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ನಗರದ ಶೇಖರೋಜಾದಲ್ಲಿರುವ ಶಹಾಬಜಾರನ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದ ವತಿಯಿಂದ ಹಮ್ಮಿಕೊಂಡಿದ್ದ ‘ವಿಶ್ವ ಕ್ಷಯರೋಗ ದಿನಾಚರಣೆ’ಯ ಪ್ರಯುಕ್ತ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸಬಹುದಾಗಿದೆ. ಇದು ಶ್ವಾಶಕೋಶಗಳಿಷ್ಟೆ ಅಲ್ಲದೆ, ದೇಹದ ಇತರೆ ಭಾಗಗಳಿಗೂ ಹರಡಬಹುದು. ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಬೇಕು. ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ಹಸಿರು ತರಕಾರಿ, ಹಾಲು, ಹಣ್ಣು, ಮೊಟ್ಟೆ, ಮೀನು, ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಟಿ.ಬಿ ಖಾಯಿಲೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಜಾಥಾದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ರೇಷ್ಮಾ, ನಾಗೇಶ್ವರಿ ಮುಗಳಿವಾಡಿ, ಗಂಗಾಜ್ಯೋತಿ ಗಂಜಿ, ಮಂಗಲಾ, ಚಂದಮ್ಮ ಮರಾಠಾ, ಜಗನಾಥ ಗುತ್ತೇದಾರ, ಗುರುರಾಜ ಖೈನೂರ್, ಆಶಾ ಕಾರ್ಯಕರ್ತೆಯರಾದ ಸುಲೋಚನಾ, ಸಂಗೀತಾ ಡಿ., ಶ್ರೀದೇವಿ, ನಾಗಮ್ಮ, ಅರ್ಚನಾ ಸಿಂಗೆ, ವಿಜುಬಾಯಿ, ನೀತಾ, ಲಕ್ಷ್ಮೀ, ಸಂಗೀತಾ, ಸುಲೋಚನಾ, ಗೌರಮ್ಮ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.