
ಗಂಗಾವತಿ ಮಾ.24: ಕ್ಷಯರೋಗ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿಬಿ ವಿಭಾಗ ಕೊಪ್ಪಳ ಹಾಗೂ ಉಪ ವಿಭಾಗ ಆಸ್ಪತ್ರೆ ಗಂಗಾವತಿ ಹಾಗೂ ಗೋಗ್ರೀನ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್ ಜಾಗೃತಿ ನಡೆಸಲಾಯಿತು.
‘ಕಾಲ ಘಟಿಸುತ್ತಿದೆ’ ಎಂಬ ಘೋಷ ವಾಕ್ಯದಡಿ ಕ್ಷಯರೋಗ ಮುಕ್ತ ಕೊಪ್ಪಳಕ್ಕಾಗಿ ಜನಾಂದೋಲನದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಹಾಗೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಗರದ ಸ್ಥಳೀಯ ಎಪಿಎಂಸಿ ಆವರಣದಿಂದ ಆರಂಭಗೊಂಡ ಸೈಕಲ್ ಜಾಥಾ, ಚನ್ನಬಸವ ಸರ್ಕಲ್, ಮಹಾವೀರ ಸರ್ಕಲ್, ಗಾಂಧಿಚೌಕ್, ಕೃಷ್ಣದೇವರಾಯ ವೃತ್ತ ಮೂಲಕ ಸಾಯಿ ನಗರ, ಸಂಗಾಪೂರ, ಆನೆಗೊಂದಿ ಮಾರ್ಗದ ಮೂಲಕ ಅಂಜನಾದ್ರಿ ಪರ್ವತ ತಲುಪಿತು.
ಅಲ್ಲದೇ ಜಾಥಾದಲ್ಲಿ ಡಿಸಿ ವಿಕಾಸ ಕಿಶೋರ್ ಸುರಳ್ಕರ್, ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಮಹೇಶ ಎಂ.ಜಿ, ತಾಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್, ಗೋಗ್ರೀನ್ ಸಂಸ್ಥೆಯ ಅಧ್ಯಕ್ಷ ಚಿನ್ನ ಪಾಟೀ ಪ್ರಭಾಕರ್ ಸೇರಿ ಅಧಿಕಾರಿಗಳು ಸೈಕಲ್ ಓಡಿಸಿ ಗಮನ ಸೆಳೆದರು.
ಜಾಥಾ ಉದ್ದಕ್ಕೂ ಕ್ಷಯರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ, ‘ಕಾಲಘಟ ಸಮೀಪಿಸುತ್ತದೆ, ಕ್ಷಯರೋಗ ಮುಕ್ತ ಭಾರತ ಎನ್ನುವ ವಿವಿಧ ಜಾಗೃತಿಯ ಸಂದೇಶಗಳು ಗಮನ ಸೆಳೆದವು.
ಈ ವೇಳೆ ನಗರ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ, ಪೌರಾಯುಕ್ತ ಅರವಿಂದ ಜಮಖಂಡಿ, ತಾ.ಪಂ.ಅಧ್ಯಕ್ಷ ಮಹ್ಮದ್ ರಫೀ, ಕ್ಷಯರೋಗದ ವಿಭಾಗದ ಶ್ರೀ ಹುಸೇನ್ ಭಾಷ ಹಾಗೂ ಮಲ್ಲಿಕಾರ್ಜುನ್ , ಆಸ್ಪತ್ರೆಯ ಸಿಬ್ಬಂದಿಗಳಾದ ಶಿವಾನಂದ್, ರಾಘವೇಂದ್ರ ಜೋಶಿ, ನಾಗರಾಜ, ಮಹಮದ್ ಇಬ್ರಾಹಿಂ, ರಾಜೀವ್, ಮಂಜುನಾಥ್, ಸ್ಯಾಮವೇಲ್, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸೇರಿ ನಾನಾ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಗೋಗ್ರೀನ್ ಸಂಸ್ಥೆಯ ಆನಂದ್ ಕೆಲೋಜಿ, ಅರವಿಂದ್ ಗೌಳಿ, ಹರಿಕೃಷ್ಣ ನೆಕ್ಕಂಟಿ ಅವರು, ಜಾಥಾದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ 500 ಟೀ ಶರ್ಟ್,1000 ಕ್ಯಾಪ್ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ್ದರು.
ಕ್ಷಯರೋಗ ನಿರ್ಮೂಲನೆಗಾಗಿ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ದೇಶವನ್ನು ಕ್ಷಯ ಮುಕ್ತವಾಗಿಸಲು ಎಲ್ಲರ ಸಹಕರಿಸಬೇಕು.
- ವಿಕಾಶ ಕಿಶೋರ ಸುರಳ್ಕರ್, ಜಿಲ್ಲಾಧಿಕಾರಿ