ಕ್ಷಯರೋಗ ನಿರ್ಮೂಲನೆಗೆ ಸಂಕಲ್ಪ ಮಾಡಿ- ಸದಾಶಿವ ಶ್ರೀ

ಹಾವೇರಿ:ಮಾ.25: ಕ್ಷಯ ರೋಗದ ಬಗೆಗೆ ಉದಾಸೀನತೆ ಬೇಡ. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಾಜದಲ್ಲಿರುವ ಕ್ಷಯ ರೋಗದ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಾಧನೆಗೆ ಆರೋಗ್ಯ ಮುಖ್ಯ. ಎಲ್ಲರೂ ಆರೋಗ್ಯದತ್ತ ಗಮನ ಹರಿಸಬೇಕು. ಹಿಂದಿನ ಸಂಪ್ರದಾಯ, ಪದ್ಧತಿಗಳ ನಿರ್ಲಕ್ಷ್ಯ ಹಾಗೂ ಆರೋಗ್ಯದ ನಿಷ್ಕಾಳಜಿಯಿಂದ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಹಾಗೂ ಎಲ್ಲರೂ ಆರೋಗ್ಯದ ಕುರಿತು ಸುರಕ್ಷತೆ ಮತ್ತು ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಕ್ಷಯ ರೋಗದ ಬಗ್ಗೆ ಜಾಗೃತಿ ವಹಿಸಿ, ಸಮಾಜಕ್ಕೆ ಇದರ ಬಗ್ಗೆ ಅರಿವು ಮೂಡಿಸಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ರೋಗ ಪತ್ತೆಯಾದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ. ಸರ್ಕಾರ ಈ ರೋಗಿಗಳಿಗೆ ಉಚಿತ ಔಷಧಿಯನ್ನು ನೀಡುವುದರ ಜೊತೆಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500ರೂ.ಗಳ ಸಹಾಯಧನವನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಗುಣಮುಖರಾಗಿ. ಯೋಗ, ಧ್ಯಾನ ಮಾಡುವುದರ ಜೊತೆಗೆ ಶುಚಿಯಾದ, ಬಿಸಿ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯದ ಜೊತೆಗೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಕೈಜೋಡಿಸಿ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಏಕನಾಥ ಭಿ. ಭಾನುವಳ್ಳಿ ಮಾತನಾಡಿ, ಹಿಂದುಳಿದ ಪ್ರದೇಶಗಳು, ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಆರೋಗ್ಯದ ಹಾಗೂ ಕ್ಷಯ ರೋಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಕೋವಿಡ್ ಹಿನ್ನಲೆಯಲ್ಲಿ ಕ್ಷಯ ರೋಗಿಯ ಪತ್ತೆ ಕಾರ್ಯಗಳು ಸರಿಯಾಗಿ ಆಗಿಲ್ಲ. ರೋಗದ ಲಕ್ಷಣವಿರುವ ವ್ಯಕ್ತಿಗಳು ಹಿಂಜರಿಕೆಯನ್ನು ಬಿಟ್ಟು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೋಗದಿಂದ ಮುಕ್ತರಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲ್ಲಿ ಸಾವಿರ ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಿಸಿದ ಶಶಿಧರ ಯಲಿಗಾರ ಹಾಗೂ ಈ ವರ್ಷದಲ್ಲಿ ಉತ್ತಮ ಸೇವೆ ಗೈದ ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯರು, ವೈದ್ಧಾಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ನರ್ಸ್‍ಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ನೀಲೇಶ ಎಮ್.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಯಲ್ಲಪ್ಪ ಕಲ್ಲೇರ, ನಗರ ಸಭೆ ಅಧ್ಯಕ್ಷರು ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್ ರಂಗನಾಥ್, ಹಾವೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಜಿಲ್ಲಾ ಕ್ಷಯ ರೋಗ ಚಿಕಿತ್ಸಕ ಜಗದೀಶ ಪಾಟೀಲ, ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ವೈದ್ಧಾಧಿಕಾರಿಗಳು ಇತರರು ಉಪಸ್ಥಿತರಿದ್ದರು.