ಕ್ಷಯರೋಗ ನಿರ್ಮೂಲನೆಗೆ ಕೈಜೋಡಿಸಿ

ಚಿತ್ರದುರ್ಗ.ಏ.೨; ಸರ್ಕಾರ 2025ರೊಳಗೆ ಕ್ಷಯ ಮುಕ್ತ ಮಾಡಲು ಪಣತೊಟ್ಟಿದೆ. ಹಾಗಾಗಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕ್ಷಯರೋಗ ನಿರ್ಮೂಲನೆಗಾಗಿ ಕೈಜೋಡಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕ್ಷಯರೋಗವನ್ನು ಹೋಗಲಾಡಿಸಲು ಹಾಗೂ ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪಾತ್ರ ಹೆಚ್ಚಿದೆ. ಶೇ.80ಕ್ಕೂ ಹೆಚ್ಚಿನ ಜನರ ಆರೋಗ್ಯ ಕಾಪಾಡಬೇಕಾಗಿರುವುದು, ಗ್ರಾಮೀಣ ಜನರ ಜೀವನ, ಜೀವವನ್ನು ಉಳಿಸಿಬೇಕಾಗಿರುವುದು ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯ ಎಂದರು.
ಪ್ರಸ್ತುತ ದಿನಗಳಲ್ಲಿ ಕ್ಷಯರೋಗಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. 1 ಲಕ್ಷಕ್ಕೆ ಜನಸಂಖ್ಯೆಗೆ ಸುಮಾರು 217 ಜನರು ಕ್ಷಯರೋಗಿಗಳಿರುತ್ತಾರೆ. ಕ್ಷಯರೋಗವು ಒಂದು ಕಾಲದಲ್ಲಿ ಕೊರೊನಾಕ್ಕಿಂತಲೂ ಭಯಾನಕವಾಗಿತ್ತು. ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತಹರಿಗೆ ಸೋಂಕು ತಗಲುತ್ತದೆ. ಕಫದಲ್ಲಿ ಕ್ಷಯ ಕ್ರಮಿಗಳುಳ್ಳ ಒಬ್ಬ ರೋಗಿಗೆ ಚಿಕಿತ್ಸೆ ಮಾಡದೇ ಇದ್ದಲ್ಲಿ ವರ್ಷಕ್ಕೆ 10-15 ಜನಕ್ಕೆ ಕ್ಷಯದ ಸೋಂಕು ಉಂಟು ಮಾಡುತ್ತಾನೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿದೆ. ಹಾಗಾಗಿ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.