ಕ್ಷಯರೋಗ ನಿರ್ಮೂಲನೆಗೆ ಕೂಡ್ಲಿಗಿಯಲ್ಲಿ ಜಾಗೃತಿ ಜಾಥಾ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.25 :- ಕ್ಷಯರೋಗ ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಪಣ ತೊಡಬೇಕು ಹಾಗೂ ಕೆಮ್ಮು ಕಫದ ಮುನ್ನೆಚ್ಚರಿಕೆಯಲ್ಲಿ ಸಮೀಪದ ವೈದ್ಯರ ಮೂಲಕ ಕ್ಷಯರೋಗ ಕಂಡುಬಂದಲ್ಲಿ ನಿರಂತರ ಔಷಧಿ ಬಳಕೆಯಲ್ಲಿ ಅದನ್ನು ದೂರಮಾಡಬಹುದಾಗಿದೆ ಎಂದು ಕೂಡ್ಲಿಗಿಯಲ್ಲಿ  ಆರೋಗ್ಯ ಇಲಾಖೆವತಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ವಿಶ್ವ ಕ್ಷಯರೋಗ ದಿನ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಮತ್ತು ಕೂಡ್ಲಿಗಿ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಸೇರಿ ಭಾಗವಹಿಸಿ ಕ್ಷಯರೋಗದ ಲಕ್ಷಣಗಳು, ಅದನ್ನು ಹೋಗಲಾಡಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಹೇಳುತ್ತ ಜನರಲ್ಲಿ ಕ್ಷಯರೋಗ ಕುರಿತು ಆರೋಗ್ಯ ಇಲಾಖೆಯಿಂದ ಜನಜಾಗೃತಿ ಮೂಡಿಸಲಾಯಿತು.
ಈ ಜಾಗೃತಿ ಜಾಥಾದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಕ ಜಗದೀಶನಾಯ್ಕ್, ರಾಜಕುಮಾರ, ಎಲ್ ಐ ಓ ಮಹೇಶ, ಎಂಟಿ ಎಸ್ ಕೊಟ್ರೇಶ, ಪಿಹೆಚ್ ಸಿ ಓ ಗಿರಿಜಾಅಂಜಿನಪ್ಪ, ಪಿಹೆಚ್ ಐಓ ಸುನೀತಾ, ಕೆಹೆಚ್ ಪಿಟಿ ಶಿವರಾಜ್ ಹಾಗೂ ಆಶಾ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.