ಕ್ಷಯರೋಗಿಗಳಿಗೆ ನಾಗಮಾರಪಳ್ಳಿ ಫೌಂಡೇಶನ್ ನೆರವು

ಬೀದರ್ :ನ.16:ನಗರದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ 135 ಜನ ಕ್ಷಯರೋಗಿಗಳನ್ನು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ದತ್ತು ಪಡೆದು ಪೌಷ್ಟಿಕ ಆಹಾರ ಮತ್ತು ಔಷಧಿಗಳ ಕಿಟ್ ವಿತರಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ, ದತ್ತು ಪಡೆದಿರುವ ಕ್ಷಯ ರೋಗಿಗಳಿಗೆ 6 ತಿಂಗಳು ಚಿಕಿತ್ಸೆಯ ಜೊತೆಗೆ ಯೋಗಕ್ಷೇಮ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

2025 ರೊಳಗಾಗಿ ಭಾರತ ಕ್ಷಯಮುಕ್ತ ದೇಶ ಮಾಡುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರನ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕು. ಆರೋಗ್ಯ ಎಲ್ಲಕ್ಕೂ ಮುಖ್ಯವಾಗಿದೆ. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ನಾಗಮಾರಪಳ್ಳಿ ಹೇಳಿದರು.

ಆರಂಭದಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಕ್ಷಯ ರೋಗಿಗಳಿಗೆ ಎಲ್ಲ ರೀತಿಯ ನೆರವು ನೀಡಲಿದೆ. ಆರೋಗ್ಯ ಸುಧಾರಣೆಗೆ ಶ್ರಮಿಸಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಶರಣಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತಾಡಿ, ಜಿಲ್ಲೆಯ ಕ್ಷಯರೋಗಿಗಳ ಮಾಹಿತಿ ನೀಡಿದರು. ಇಲ್ಲಿಯವರೆಗೆ ನಿಕ್ಷಯ ಮಿತ್ರರು 113 ಕ್ಷಯರೋಗಿಗಳನ್ನು ನೋಂದಣಿ ಮಾಡಿಸಿದ್ದು, 166 ಕ್ಷಯರೋಗಿಗಳನ್ನು ದತ್ತು ಪಡೆಯಲಾಗಿದೆ ಎಂದು ನುಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬೀದರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಡಾ. ಸೊಹೇಲ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ಗೌತಮ ಸ್ವಾಗತಿಸಿದರು. ಟಿ.ಎಂ.ಮಚ್ಚೆ ನಿರೂಪಿಸಿದರು.