ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಣೆ

ಗಂಗಾವತಿ ಜೂ 02: ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಕ್ಷಯರೋಗಿಗಳಿಗೆ ಆಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ, ಒಳ್ಳೆಯ ಚಿಕಿತ್ಸಾ ಕ್ರಮಗಳನ್ನು ಸರ್ಕಾರ ನೀಡುತ್ತಿದೆ. ಉಪವಿಭಾಗ ಆಸ್ಪತ್ರೆಯ ಸಿಬ್ಬಂದಿ ಕೂಡ ಕ್ಷಯ ರೋಗಿಗಳಿಗೆ ತುಂಬಾ ಸಮಂಜಸವಾದ ಚಿಕಿತ್ಸೆಯ ಜೊತೆಗೆ ಆತ್ಮಸ್ಥೈರ್ಯ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ಕ್ಷಯ ರೋಗಿಗಳನ್ನು ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ನೀಡುವ ಮಹತ್ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.
ಕರೋನ ಲಾಕ್ ಡೌನ್ ಹಿನ್ನೆಲೆ ಕ್ಷಯರೋಗಗಳ ಕುಟುಂಬಕ್ಕೆ ಆಹಾರದ ಕೊರತೆ ಆಗದಂತೆ ವೈಯಕ್ತಿಕವಾಗಿ 125 ಜನ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುತ್ತದೆ. ಕರೋನ ಸೋಂಕನ್ನು ಎಲ್ಲರೂ ಧೈರ್ಯದಿಂದ ಎದುರಿಸಬೇಕು ಎಂದರು.
ಕಾಡ್ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಕ್ಷಯರೋಗಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲ. ಇದು ಒಂದು ಗುಣಪಡಿಸಬಲ್ಲ ರೋಗ. ಆರೋಗ್ಯ ಇಲಾಖೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ಸಾರ್ವಜನಿಕರು ಲಕ್ಷಣಗಳು ಗೋಚರಿಸಿದಾಗ ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿದರು.
ಡಾ.ಈಶ್ವರ್ ಸವಡಿ ಮಾತನಾಡಿ, ಕ್ಷಯ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಸಕ ಪರಣ್ಣ ಮನವಳ್ಳಿ ಅವರು ಸುಮಾರು 100 ಆರ್ಥಿಕವಾಗಿ ಹಿಂದುಳಿದ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ಕೊಡುತ್ತಿರುವುದು ಪ್ರಶಂಸನೀಯ. ಕ್ಷಯರೋಗಿಗಳು ಸರಿಯಾದ ಸಮಯಕ್ಕೆ ಅಗತ್ಯ ಪರೀಕ್ಷೆ ಹಾಗೂ ಮಾತ್ರೆಯನ್ನು ಸೇವಿಸುವ ಮುಖಾಂತರ ಸಮಯಕ್ಕೆ ಆರೋಗ್ಯಕರ ಜೀವನ ನಡೆಸಬೇಕೆಂದು ಕರೆಕೊಟ್ಟರು.
ಈ ವೇಳೆ ಕ್ಷಯರೋಗ ವಿಭಾಗದ ಮಲ್ಲಿಕಾರ್ಜುನ, ಹುಸೇನ್ ಬಾಷಾ, ಕಾಶಿಮ್ ಬಿ., ಹನುಮಂತಪ್ಪ, ಉಪವಿಭಾಗ ಆಸ್ಪತ್ರೆಯ ಸಿಬ್ಬಂದಿಗಳಾದ ಪಲ್ಲವಿ ದೇಸಾಯಿ, ಕಿರಣ್ ಕುಮಾರ್, ಶಿವಾನಂದ ನಾಯ್ಕರ್, ರಾಜೀವ, ಸ್ಯಾಮ ವೇಲ್, ಸಂಜು, ಅರುಣ್ ಯಮನೂರಪ್ಪ ಇದ್ದರು.