ಕ್ಷಯರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಲು ಸಲಹೆ


ಬಳ್ಳಾರಿ,ಜು.26: ಒಬ್ಬರಿಂದ ಒಬ್ಬರಿಗೆ ಹರಡುವ ಕ್ಷಯರೋಗವನ್ನು ಆರಂಭದಲ್ಲಿಯೇ ಗುರ್ತಿಸಿ ರೋಗ ಹರಡದಂತೆ ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಿ ಎಂದು ಡಾ.ಬಿ.ಕೆ.ಸುಂದರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಕ್ಷಯಮಿತ್ರ ಯೋಜನೆಯಡಿ 10 ಕ್ಷಯರೋಗಗಳನ್ನು 06 ತಿಂಗಳಗಳವರೆಗೆ ದತ್ತು ತೆಗೆದುಕೊಂಡು ತಾವೇ ದಾನಿಗಳಾಗಿ ಆಹಾರ ಸಾಮಗ್ರಿಗಳನ್ನು ಹೊಂದಿದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೂಕ್ತ ಆರೈಕೆಗಾಗಿ ದೇಶದ  ಪ್ರಧಾನಮಂತ್ರಿಗಳ ಆಶಯದ ಉತ್ತಮ ಯೋಜನೆಯಾಗಿದ್ದು, ಎಲ್ಲರೂ ದಾನಿಗಳಾಗಿ ಮುಂದೆ ಬರಲು ಇದೊಂದು ಅವಕಾಶವಾಗಿದೆ ಎಂದರು.
ಶ್ವಾಸಕೋಶದ ಹಾಗೂ ಶ್ವಾಸಕೋಶೆತರ ಕ್ಷಯ ಎಂಬ ಎರಡು ವಿಧ ಹೊಂದಿರುವ ಕ್ಷಯರೋಗ ಯಾರಿಗಾದರೂ ಬರಬಹುದು, ಈ ನಿಟ್ಟಿನಲ್ಲಿ ಮುಂಜಾಗೃತೆಯೊಂದಿಗೆ ರೋಗ ತಡೆಯಲು ಸರಕಾರದೊಂದಿಗೆ ಪ್ರತಿಯೊಬ್ಬರು ಕೈಜೊಡಿಸಬೇಕು ಎಂದು ವಿನಂತಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಕೆಮ್ಮು ಬಂದಾಗ ಕಫವನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಇನ್ನೊಬ್ಬರೊಂದಿಗೆ ಮಾತನಾಡುವಾಗ ಕೆಮ್ಮು ಬಂದರೆ ಬಾಯಿಗೆ ಅಂಗೈ ಅಥವಾ ಮೊಣಕೈ ಒಳಭಾಗವನ್ನು, ಕರವಸ್ತ್ರ ಅಡ್ಡಲಾಗಿ ಹಿಡಿಯಬೇಕು ಎಂದರು.
ಪ್ರಸ್ತುತ ಕ್ಷಯರೋಗ ಪತ್ತೆ ಹಚ್ಚುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ನಡೆಯುತ್ತಿದ್ದು, ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ದಿನಗಳಿಂದ ಕಡಿಮೆಯಾಗದ ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕೆಮ್ಮಿದಾಗ ಕಫದಲ್ಲಿ ರಕ್ತ ಬಿಳುವುದು, ಹಸಿವಾಗದಿರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಪದೆ ಒದೆ ಎದೆ ನೋವು, ಕಂಡುಬಂದಲ್ಲಿ ಅಥವಾ ಈಗಾಗಲೆ ತಮ್ಮ ಕುಟುಂಬದಲ್ಲಿ ಯಾರಾದರೂ ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿದ್ದರೆ ದಯವಿಟ್ಟು  ಕಫ ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಔಷಧಾಧಿಕಾರಿ ಬೈಲಪ್ಪ, ಪ್ರಾಥಮಿಕ ಸುರಕ್ಷಾಧಿಕಾರಿ ನಾಗಮಣಿ, ಎಸ್‍ಟಿಎಸ್ ವೀರೇಶ, ಎಸ್‍ಟಿಎಲ್‍ಎಸ್ ಚಂದ್ರಶೇಖರ ಸೇರಿದಂತೆ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.