ಕ್ಷಯಮುಕ್ತ ಜಿಲ್ಲೆಯನ್ನಾಗಿಸೋಣ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೪; ನಿಗದಿತ ಅವಧಿಯ ಚಿಕಿತ್ಸೆಯಿಂದ ಕ್ಷಯರೋಗ ಗುಣಪಡಿಸಬಹುದು ಹಾಗೂ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುಧಾ ಹೇಳಿದರು.ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್ ವತಿಯಿಂದ ನಿಕ್ಷಯ ಮಿತ್ರ ಯೋಜನೆ ಅಡಿ ಕ್ಷಯ ರೋಗಿಗಳ ಪೌಷ್ಠಿಕಾಂಶ ಬಲವರ್ಧನೆಗಾಗಿ ದತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪತ್ತೆ ಚಿಕಿತ್ಸೆ ಹಾಗೂ ಕ್ಷಯರೋಗಕ್ಕೆ ಪ್ರತಿದಿನ ತೆಗೆದುಕೊಳ್ಳುವ ಔಷಧಿಗಳು ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಕ್ಷಯ ರೋಗಿಗಳನ್ನು ನೋಂದಣಿ ಮಾಡಿಸಿಕೊಂಡು 6 ತಿಂಗಳವರಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರಿಕೃತವಾಗಿಸಿಕೊಂಡು ಮನೆ ಭೇಟಿಯ ಮೂಲಕ ಸಕ್ರಿಯ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ನಿಮ್ಮ ಮನೆ ಬಾಗಿಲಿಗೆ ಬರುವ ಆಶಾ ಹಾಗೂ ಆರೊಗ್ಯಕಾರ್ಯಕರ್ತೆಯರಿಗೆ  ಸಹಕರಿಸಿ ಎಂದರು.ಎಲ್ಲೆಂದರಲ್ಲಿ ಉಗುಳಬಾರದು ಹಾಗೂ ಶುಚಿತ್ವ ಮನೋಭಾವ ಬೆಳೆಸಿಕೊಳ್ಳಬೇಕು. ಅದರ ಜೊತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನಾಗಿ ಮಾಡಬೇಕು. ಸಾಂಪ್ರದಾಯದಿಂದ ಬಂದ ಸಂಸ್ಕøತಿ ಉಳಿಸಿಕೊಳ್ಳಬೇಕು ಎಂದರು.ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್ ಅಧ್ಯಕ್ಷೆ ಡಾ. ತೋಜಾಕ್ಷಿಬಾಯಿ ಮಾತನಾಡಿ, ಬದ್ದತೆಯಿಂದ ಚಿಕಿತ್ಸೆ ಪಡೆದರೆ ಕ್ಷಯರೋಗವು ಸಂಪೂರ್ಣವಾಗಿ ವಾಸಿಯಾಗುತ್ತದೆ ಅದಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಕ್ಷಯರೋಗವು ಪ್ರಮುಖವಾಗಿ ಶ್ವಾಸಕೋಶಕ್ಕೆ ಹರಡುತ್ತದೆ. ಕ್ಷಯರೋಗವು ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಹೆಚ್ಚಾಗಿ ಬರುವ ಸಾಧ್ಯತೆ ಇರುತ್ತದೆ. ವ್ಯಾಯಮ, ಪ್ರಾಣಾಯಾಮ ಮಾಡುವುದರಿಂದ ರೋಗ ಮುಕ್ತರಾಗಬಹುದು. ಒಳ್ಳೆಯ ಗಾಳಿ ಪಡೆಯಲು ಗಿಡ ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.