ಕ್ಷಯಕ್ಕೆ ಭಯ ಬೇಡ ನಿಗದಿತ ಚಿಕಿತ್ಸೆ ಲಭ್ಯವಿದೆ

ಚಿತ್ರದುರ್ಗ.ಮೇ.೨೩; ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗ. ಚಿಕಿತ್ಸೆ ಪಡೆಯದ ಕ್ಷಯ ರೋಗಿ ಒಂದು ವರ್ಷಕ್ಕೆ 10 ರಿಂದ 15 ಜನರಿಗೆ ರೋಗವನ್ನು ಹರಡಬಲ್ಲನು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಗ್ರಾಮದಲ್ಲಿ  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.ಶೀಘ್ರ ಪತ್ತೆ  ತ್ವರಿತ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಸಹಿತ ಕಫ ಸಂಜೆ ವೇಳೆ ಜ್ವರ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಸುವುದು ಒಳಿತು ಎಂದರು.
ಕ್ಷಯ ರೋಗ ದೃಢಪಟ್ಟ ರೋಗಿಗೆ ಸರ್ಕಾರದಿಂದ ಉಚಿತ ಔಷಧಿ ಒದಗಿಸಲಾಗುವುದು. ಚಿಕಿತ್ಸಾ ಅವಧಿಯಲ್ಲಿ ರೋಗಿಗೆ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ ಐದು ನೂರು ರೂಪಾಯಿಗಳನ್ನು  ಉಚಿತವಾಗಿ ರೋಗಿಯ ಬ್ಯಾಂಕ್ ಖಾತೆಗೆ ಹಾಕಲಾಗುವುದು. ರೋಗ ಹರಡದಂತೆ ಸಾರ್ವಜನಿಕರು ಆರೋಗ್ಯ ಮಾಹಿತಿ ಪಡೆದುಕೊಳ್ಳಬೇಕು. ರೋಗಿಯು ಎಲ್ಲೆಂದರಲ್ಲಿ ಉಗುಳಬಾರದು, ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಕೆ ಮಾಡಬೇಕು. ವೈದ್ಯರ ಸಲಹೆಯಂತೆ ಸಂಪೂರ್ಣ ಚಿಕಿತ್ಸೆ 6 ರಿಂದ 8 ತಿಂಗಳು ಪಡೆದಲ್ಲಿ ರೋಗವನ್ನು ಹತ್ತಿಕ್ಕಬಹುದು ಎಂದರು.