ಕ್ಷಮೆ ಕೋರಿದರೆ ಅಮಾನತು ಪರಿಶೀಲನೆ

ಅನುಚಿತ ವರ್ತನೆ

ನವದೆಹಲಿ, ನ.೩೦- ಮುಂಗಾರು ಅಧಿವೇಶನದ ಕಡೆಯ ದಿನ ಅನುಚಿತ ವರ್ತನೆ ತೋರಿ ಅಮಾನತ್ತು ಗೊಂಡಿರುವ ವಿವಿಧ ಪಕ್ಷಗಳ ೧೨ ರಾಜ್ಯಸಭಾ ಸದಸ್ಯರು ಕ್ಷಮೆ ಕೋರಿದರೆ, ಈ ಸಂಬಂಧ ಪರಿಶೀಲಿಸಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
೧೨ ಸದಸ್ಯರನ್ನು ಅಮಾನತು ಮಾಡಿರುವ ಕ್ರಮವನ್ನು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು, ಅನುಚಿತ ವರ್ತನೆ ತೋರಿ ಸದನದಿಂದ ಅಮಾನತುಗೊಂಡಿರುವ ೧೨ ಸದಸ್ಯರು ಕ್ಷಮೆ ಕೋರಿದರೆ. ಈ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸದನದಲ್ಲಿ ಪ್ರಮುಖ ಮಸೂದೆಗಳ ಚರ್ಚೆಯಾಗಬೇಕಾಗಿದೆ ಇದಕ್ಕೆ ವಿರೋಧ ಪಕ್ಷಗಳ ಸಹಕಾರ ಅಗತ್ಯ ನಿಟ್ಟಿನಲ್ಲಿ ಅಮಾನತುಗೊಂಡಿರುವ ಸದಸ್ಯರು ಕ್ಷಮೆ ಕೋರಿದರೆ ಅವರ ಅಮಾನತು ಮಾಡಿರುವ ಕ್ರಮವನ್ನು ಹಿಂತೆಗೆದುಕೊಳ್ಳಲು ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.
ಸದನದ ಕಲಾಪ ನಡೆಯುವಾಗ ಪ್ರತಿಯೊಬ್ಬರೂ ಗೌರವ ಘನತೆ ಕಾಪಾಡಿಕೊಳ್ಳುವುದು ಒಳಿತು. ಅದನ್ನು ಮೀರಿ ನಡೆದು ಕೊಳ್ಳುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ ೧೧ರಂದು ನಡೆದ ಮುಂಗಾರು ಅಧಿವೇಶನದ ಕಡೆಯದಿನ ಹಲವು ಸದಸ್ಯರು ನಿಯಮ ಮೀರಿ ನಡೆದುಕೊಂಡಿದ್ದಾರೆ ಎಂದು ಚಳಿಗಾಲದ ಅಧಿವೇಶನಕ್ಕೆ ಅವರನ್ನು ನಿರ್ಬಂಧ ಹೇರಲಾಗಿದೆ.
ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೇರಿ ಸದಸ್ಯರ ಅಮಾನತು ವಾಪಸ್ ಪಡೆಯುವುದು ಸೇರಿದಂತೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ

ರ್ಚೆಗೆ ಸಿದ್ದ:
ವಿರೋಧಪಕ್ಷಗಳು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡುವ ಎಲ್ಲ ವಿಷಯಗಳ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡುವ ಎಲ್ಲ ವಿಷಯಗಳು ನಿಯಮದಡಿ ಇದ್ದರೆ ಅದನ್ನು ನಿಯಮದ ಮೂಲಕ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುವುದು. ಇದರಿಂದ ಫಲಪ್ರದ ಚರ್ಚೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.