ಕ್ಷಮೆ ಕೇಳಿಲ್ಲ, ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ: ಶಾಸಕ ಬಿ.ಆರ್. ಪಾಟೀಲ್

ಕಲಬುರಗಿ,ಜು.30: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೊಬ್ಬರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸೇರಿದಂತೆ ನಾಯಕರ ಮುಂದೆ ಕ್ಷಮೆ ಕೇಳಿಲ್ಲ ಎಂದು ಆಳಂದ್ ಶಾಸಕರೂ ಆದ ರಾಜ್ಯ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್ ಅವರು ಹೇಳಿದರು.
ಭಾನುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಯಾಕೆ ಹಾಗೇ ಹೇಳಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕ್ಷಮೆ ಕೇಳಿರುವುದಾಗಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿವೆ. ನಾನ್ಯಾಕೆ ಕ್ಷಮೆ ಕೇಳಬೇಕು?, ನಾನು ಏನೂ ತಪ್ಪು ಮಾಡಿಲ್ಲ. ಹೀಗಾಗಿ ತಪ್ಪು ಮಾಡದ ನಾನು ಕ್ಷಮೆ ಕೇಳಿಲ್ಲ, ಕೇಳುವುದೂ ಇಲ್ಲ. ಕ್ಷಮೆ ಕೇಳುವಂತಹ ಹೇಡಿಯೂ ನಾನಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಎದ್ದು ಹೊರ ನಡೆದಿದ್ದು ನಿಜ. ನನ್ನ ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುವುದಾಗಿ ಹೇಳಿದ್ದೇನೆ. ನನ್ನ ಮಾತಿಗೆ ನಾನು ಬದ್ಧ ಎಂದು ಬಿ.ಆರ್. ಪಾಟೀಲ್ ಅವರು ತಿಳಿಸಿದರು.
ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ನಾನಂತೂ ಕ್ಷಮೆ ಕೇಳಿಲ್ಲ ಎಂದು ಪುನರುಚ್ಛರಿಸಿದ ಅವರು, ನನ್ನ ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ನೀಡುವುದಾಗಿ ಹೇಳಿ ಪಕ್ಷದ ಶಾಸಕಾಂಗ ಸಭೆಯಿಂದ ಹೊರಹೋಗುತ್ತಿದ್ದಾಗ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕರೆದು ಸಮಾಧಾನಪಡಿಸಿದರು ಎಂದು ಅವರು ಹೇಳಿದರು.
ಮೊನ್ನೆ ರಾತ್ರಿ 8-30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನನಗೆ ಮೊಬೈಲ್ ಕರೆ ಮಾಡಿ ಮಾತನಾಡಿದರು. ಆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕಡಿಮೆ ಹಣ ಬರುತ್ತಿದೆ. ಮುಂದಿನ ವರ್ಷದಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡುವುದಾಗಿಯೂ ಹೇಳಿದರು ಎಂದು ತಿಳಿಸಿದ ಅವರು, ನಾನು ನನ್ನ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಎಲ್ಲಿಯೂ ಹೇಳಿಲ್ಲ, ಪತ್ರದಲ್ಲಿಯೂ ಉಲ್ಲೇಖ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲವೂ ಚರ್ಚೆಯಾಗಿವೆ. ಆ ಕುರಿತು ಮಾಧ್ಯಮಗಳ ಮುಂದೆ ಹೇಳಲು ಆಗದು ಎಂದು ತಿಳಿಸಿದ ಅವರು, ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಆಗಿದೆ ಎಂದು ತಿಳಿಸಿದರು.