ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ


ಸಂಜೆವಾಣಿ ವಾರ್ತೆ
ಕಂಪ್ಲಿ,ಜು.30 ಶಾಸಕ ಜೆ.ಎನ್.ಗಣೇಶ್ ಅವರ ಬಗ್ಗೆ ಯಾರು ಮಾತನಾಡಬಾರದು, ಈಗಾಗಲೆ ಹಗುರವಾಗಿ ಮಾತನಾಡಿರುವ ಬಿ.ನಾರಾಯಣಪ್ಪ ಮತ್ತು ಜವುಕು ಎನ್.ವೀರೇಶ್ ಕೂಡಲೆ ಕ್ಷಮೆ ಕೇಳಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಜವುಕು ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಶಾಸಕ ಜೆ.ಎನ್.ಗಣೇಶ್ ಅವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
  ಅಕ್ರಮ ಅನ್ನ ಭಾಗ್ಯ ಅಕ್ಕಿ ದಾಸ್ತಾನು ಮಾಡಿದವರನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಬಿ.ನಾರಾಯಣಪ್ಪ ಮತ್ತು ಎನ್.ರಾಮಾಂಜನೇಯಲು ಬಗ್ಗೆ ಯಾವುದೇ ರೀತಿಯ ಹಗುರವಾದ ಮಾತನ್ನು ಆಡಿಲ್ಲ. ಶಾಸಕರಾಗಿ ಅಕ್ರಮ ಅನ್ನ ಭಾಗ್ಯ ಅಕ್ಕಿ ದಾಸ್ತಾನು ಮಾಡಿದವರನ್ನು ಹಿಡಿದಿರುವುದು ಒಳ್ಳೆಯ ಕೆಲಸವಾಗಿದೆ. ಬಿ.ನಾರಾಯಣಪ್ಪ ಮುಂದಿನ ಎಂ.ಎಲ್.ಎ.ಚುನಾವಣೆಗೆ ನಿಲ್ಲುವ ಉದ್ದೇಶ ಇಟ್ಟುಕೊಟ್ಟಿರುವುದು ಒಳ್ಳೆಯದೆ. ಶಾಸಕರ ವಿರುದ್ಧ ಮಾತನಾಡುವುದಕ್ಕಿಂತ ಸಮಾಜದವರನ್ನು ಭೇಟಿಯಾಗಿ ಚುನಾವಣೆಗೆ ನಿಲ್ಲಲಿ. ನಾರಾಯಣಪ್ಪ, ರಾಮಾಂಜನೇಯಲು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರು ರಾಜಕೀಯಕ್ಕಾಗಿ ಸಮಾಜವನ್ನು ಒಡೆಯ ಕೆಲಸ ಮಾಡಬಾರದು ಎಂದು ಹೇಳಿದರು.
 ಕೊಟ್ಟಾಲ್ ವೀರೇಶ ಮಾತನಾಡಿ, ಡಾ.ವೆಂಕಟೇಶ್ ಮತ್ತು ಎನ್.ವೀರೇಶ್ ಇತ್ತೀಚಿನ ಸಭೆಯೊಂದರಲ್ಲಿ ಶಾಸಕ ಜೆ.ಎನ್.ಗಣೇಶ ಅವರು ಕ್ಷೇತ್ರಕ್ಕೆ ಏನು ಕೆಲಸ ಮಾಡಿಲ್ಲವೆಂದು ಟೀಕಿಸಿದ್ದಾರೆ. ರಾಮುಲು ಎಂ.ಪಿ.ಯಾಗಿ ಸುರೇಶಬಾಬು 10 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ. ಜಿಲ್ಲೆಯಲ್ಲಿ ಎಂ.ಪಿ., ಎಂ.ಎಲ್.ಎ.ಗಳು ನಮ್ಮವರೆ ಇದ್ದರು. ಕಂಪ್ಲಿಯಲ್ಲಿ ವಾಲ್ಮೀಕಿ ಸಮಾಜಕ್ಕೆ ಒಂದು ಸಮುದಾಯ ಭವನವಿಲ್ಲ. ಈ ಕ್ಷೇತ್ರಕ್ಕೆ 25 ವರ್ಷದ ಮೀಸಲಾತಿ ಬಂದಿದ್ದು, ಅದು ಪೂರ್ಣಗೊಳ್ಳುವುದರೊಳಗೆ ಎಸ್.ಟಿ.ಸಮುದಾಯಕ್ಕೆ ಏನಾದರು ಒಳ್ಳೆಯ ಕೆಲಸ ಮಾಡಿರೆಂದು ಆಗ್ರಹಿಸಿದರು.
  ಸಭೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಜವುಕು ಬಸವರಾಜ, ಹೊನ್ನಳ್ಳಿ ದೇವಣ್ಣ, ದೇವಲಾಪುರ ಪೂಜಾರಿ ರಮೇಶ, ಜವುಕು ಸಿದ್ದಪ್ಪ, ಬೆಳಗೋಡು ವಾಸುದೇವ, ಹೊನ್ನಳ್ಳಿ ದೇವಣ್ಣ, ಚಿಕ್ಕಜಾಯಿಗನೂರು ವೀರೇಶ ನಾಯಕ, ದೇವಸಮುದ್ರ ಪಂಪಾಪತಿ, ವೆಂಕೋಬಣ್ಣ, ನಾಗಭೂಷಣ, ವೆಂಕಟೇಶ, ಸೋಮಪ್ಪ ವಾಲ್ಮೀಕಿ ಸಮಾಜದ ಅನೇಕರು ಪಾಲ್ಗೊಂಡಿದ್ದರು.