ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಸಿಡಿ ಯುವತಿ

ಬೆಂಗಳೂರು, ಮಾ. ೩೦- ರಾಸಲೀಲೆ ಸಿಡಿ ಪ್ರಕರಣದ ಯುವತಿ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಕ್ಷಣ ಕ್ಷಣಕ್ಕೂ ಕುತೂಹಲ ಸೃಷ್ಟಿಸಿದ ಪ್ರಸಂಗ ನಡೆಯಿತು.
ಹಾಗೆ ನೋಡಿದರೆ ಯುವತಿ ನಿನ್ನೆಯೇ ಕೋರ್ಟ್‌ಗೆ ಹಾಜರಾಗುವುದಾಗಿ ಸಂತ್ರಸ್ತ ಯುವತಿಯ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರಾದರೂ ನಿನ್ನೆ ಅದೇಕೋ ಏನೋ ಯುವತಿ ಕೋರ್ಟ್‌ನಿಂದ ದೂರ ಉಳಿದಿದ್ದು, ಕುತೂಹಲ ಇಮ್ಮಡಿಯಾಯಿತು.
ರಾಸಲೀಲೆ ಪ್ರಕರಣ ಬಹಿರಂಗಗೊಂಡು ೨೮ ದಿನಗಳ ಬಳಿಕ ರಹಸ್ಯ ಸ್ಥಳದಲ್ಲಿ ಯುವತಿ ತಂಗಿದ್ದ ಸ್ಥಳದ ಗುಟ್ಟು ಯಾರಿಗೂ ಗೊತ್ತಾಗಲಿಲ್ಲ. ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ ಆಕೆಯ ಹೆಜ್ಜೆ ಜಾಡನ್ನು ಹಿಡಿದು ಶೋಧನಾ ಕಾರ್ಯ ನಡೆಸಿದರೂ ಸಹ ಯುವತಿ ರಹಸ್ಯ ತಾಣದ ಬಗ್ಗೆ ಮಾಹಿತಿ ಗೊತ್ತಾಗಲೇ ಇಲ್ಲ. ಆದರೆ ಆಕೆಯ ಪರ ವಕೀಲ ಜಗದೀಶ್ ಕುಮಾರ್ ಮತ್ತು ಅವರ ಸ್ನೇಹಿತರು ಯುವತಿ ಜೊತೆ ಸಂಪರ್ಕದಲ್ಲಿದ್ದರು.
ಇಂದು ಬೆಳಿಗ್ಗೆ ನ್ಯಾಯಾಲಯದ ಮುಂದೆ ಯುವತಿ ಹಾಜರಾಗುತ್ತಾರೆ ಎಂದು ವಕೀಲರು ಹೇಳಿಕೆ ನೀಡಿದ್ದರು. ಆದರೆ ಆಕೆ ಕೋರ್ಟ್‌ಗೆ ಹಾಜರಾಗುವ ಹೊತ್ತು ಮೀರಿ ಹೋಗಿತ್ತು. ರಹಸ್ಯ ಸ್ಥಳದಿಂದ ಹೊರಟ ಯುವತಿಯ ಕಾರನ್ನು ೫ ಕಾರುಗಳಲ್ಲಿ ವಿಶೇಷ ತಂಡ ಹಿಂಬಾಲಿಸಿತು.
ಈ ಹಿಂದೆ ಸಂತ್ರಸ್ತೆ ಯುವತಿ ೫ ವಿಡಿಯೋಗಳನ್ನು ಬಿಡುಗಡೆ ಮಾಡಿ ತನಗೆ ಪ್ರಾಣ ಭಯವಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ಬಗ್ಗೆ ತಮಗೆ ನಂಬಿಕೆಯಿಲ್ಲ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಏನೂ ಬೇಕಾದರೂ ಮಾಡಬಹುದು, ಈ ಹಿನ್ನಲೆಯಲ್ಲಿ ತಮಗೆ ರಕ್ಷಣೆ ನೀಡಿದರೆ, ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಳು. ಈಗ ನ್ಯಾಯಾಲಯ ಆಕೆಯ ರಕ್ಷಣೆಗೆ ಅನುಮತಿ ನೀಡಿರುವುದರಿಂದ ಯುವತಿ ಕೋರ್ಟಿಗೆ ಹಾಜರಾಗಿ ನೀಡಿರುವ ಹೇಳಿಕೆ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.