‘ಕ್ವೀನ್ ಆಫ್ ಇಂಡಿಯನ್ ಪಾಪ್’ ಉಷಾ ಉತ್ತುಪ್ ಅವರ ಪ್ರೇಮ ಕತೆ ದ್ವಿತೀಯ ಪತಿ ಜಾನಿ ಚಾಕೊ ಉತ್ತುಪ್ ನಿಧನ

ಭಾರತೀಯ ಸಿನಿಮಾದ ಪಾಪ್ ಗಾಯಕಿ ಎಂದೇ ಪರಿಚಿತ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೋ (೭೮ ವರ್ಷ)ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಆದರೆ ಜಾನಿ ಚಾಕೊ ಅವರು ಗಾಯಕಿ ಉಷಾ ಉತ್ತುಪ್ ರ ಎರಡನೇ ಪತಿ ಎಂಬುದು ನಿಮಗೆ ತಿಳಿದಿದೆಯೇ. ಮದುವೆಯಾಗಿದ್ದ ಉಷಾ ಉತ್ತುಪ್ ಅವರ ಪ್ರೇಮಕಥೆಯು ಜಾನಿಯೊಂದಿಗೆ ಹೇಗೆ ಪ್ರಾರಂಭವಾಯಿತು…?
ಜಾನಿ ಚಾಕೋ ಸತ್ತಿದ್ದು ಹೇಗೆ?:
ಪದ್ಮಭೂಷಣ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಮತ್ತು ನಟಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ ಅವರು ೮ ಜುಲೈ ೨೦೨೪ ರಂದು ಕೋಲ್ಕತ್ತಾದಲ್ಲಿ ನಿಧನರಾದರು. ಆ ವೇಳೆ ಜಾನಿ ಉತ್ತುಪ್ ಮನೆಯಲ್ಲಿ ಟಿವಿ ನೋಡುತ್ತಿದ್ದರು. ಈ ಸಮಯದಲ್ಲಿ ಅವರು ಎದೆನೋವು ಎಂದು ಹೇಳಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.


ಉಷಾ ಉತ್ತುಪ್ ಅವರ ಮೊದಲ ಪತಿ ಯಾರು?
ಉಷಾ ಉತ್ತುಪ್ ಅವರ ಮೊದಲ ಗಂಡನ ಹೆಸರು ರಾಮು. ಅವರು ೧೯೭೦ ರ ದಶಕದಲ್ಲಿ ವಿವಾಹವಾದರು. ಉಷಾ ಕೋಲ್ಕತ್ತಾದ ಪ್ರಸಿದ್ಧ ರಾತ್ರಿ ಕ್ಲಬ್ ಟ್ರಿಂಕಾಸ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು. ಆ ಸಮಯ ಅವರ ಪತಿ ರಾಮು ಅವರೊಂದಿಗೆ ವಾಸಿಸುತ್ತಿದ್ದರು. ಒಂದು ದಿನ ಪ್ರದರ್ಶನದ ಸಮಯದಲ್ಲಿ, ಉಷಾ ಅವರ ಮೊದಲ ದೃಷ್ಟಿ ಅವರ ಬಳಿಯ ಮೇಜಿನ ಮೇಲೆ ಕುಳಿತಿದ್ದ ಜಾನಿ ಚಾಕೊ ಅವರ ಮೇಲೆ ಬಿತ್ತು.
ಈ ನೈಟ್‌ಕ್ಲಬ್‌ನಲ್ಲಿ ಉಷಾ ಕ್ಲಾಸಿಕ್ ’ಎ ಟೇಸ್ಟ್ ಆಫ್ ಹನಿ’ ಯನ್ನು ಪ್ರದರ್ಶಿಸುತ್ತಿದ್ದಾಗ, ಜಾನಿ ಚಾಕೊ ತನ್ನ ಪತಿ ರಾಮು ಅವರೊಂದಿಗೆ ಮಾತನಾಡುತ್ತಿರುವುದನ್ನು ಉಷಾ ಅವರು ಗಮನಿಸಿದರು. ಪತಿ ಬೇರೆಯವರೊಂದಿಗೆ ಮಾತನಾಡುವುದನ್ನು ನೋಡಿ ಉಷಾಗೆ ತನ್ನ ಪತಿಗೆ ಮಾತನಾಡಲು ಜೊತೆಗಾರರು ಸಿಕ್ಕಿದ್ದರಿಂದ ಸಮಾಧಾನವಾಯಿತು. ಮರುದಿನ, ರಾಮು ಅವರು ಉಷಾಗೆ “ಜಾನಿ ಚಾಕೊ ತನ್ನನ್ನು ಊಟಕ್ಕೆ ಕರೆದಿದ್ದಾನೆ” ಎಂದು ಹೇಳಿದರು, ಅದು ಅವರ ಸ್ನೇಹವನ್ನು ಬಲಪಡಿಸುತ್ತದೆ ಎಂದರು.
ಆದರೆ, ಅದೇ ದಿನ ಸಂಜೆ ಉಷಾ ನೈಟ್ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಅಲ್ಲಿ ಜಾನಿ ಚಾಕೊ ಅವರನ್ನು ಉಷಾ ಕಂಡರೂ ತಮ್ಮ ಪತಿ ರಾಮು ಮಾತ್ರ ಕಾಣಲಿಲ್ಲ.
ಕಾರ್ಯಕ್ರಮದ ನಂತರ, ಜಾನಿ ಅವರು ಉಷಾರನ್ನು ಸಂಪರ್ಕಿಸಿದರು ಮತ್ತು ಅವರ ಮನೆಗೆ ಡ್ರಾಪ್ ಮಾಡುವೆ ಎಂದರು. ಅದನ್ನು ಉಷಾ ಒಪ್ಪಿಕೊಂಡರು ಮತ್ತು ಇಬ್ಬರೂ ಮೌನವಾಗಿ ಮನೆಯ ಕಡೆಗೆ ನಡೆದರು.


ಮನೆಗೆ ತಲುಪಿದಾಗ ನಿಜವಾದ ತಿರುವು ಬಂದಿತು:
ಉಷಾ ಅವರು ಮನೆಗೆ ಬಂದವರು ಬಾಗಿಲು ಬಡಿದ ಕೂಡಲೇ ರಾಮು ಬಂದು ಬಾಗಿಲು ತೆರೆದರು. (ಇದು ಉಷಾ ಅವರ ಜೀವನ ಚರಿತ್ರೆಯಲ್ಲಿ ಹೇಳಲಾಗಿದೆ.) ರಾಮು ಅವರಿಗೆ ಜಾನಿಯನ್ನು ಉಷಾರ ಜೊತೆ ನೋಡಿದಾಗ ಈ ದೃಶ್ಯ ಇಷ್ಟವಾಗಲಿಲ್ಲ. ಹೀಗಿರುವಾಗ ರಾಮು ಅವರು ಜಾನಿಯನ್ನು ಹೊರಗಿನಿಂದಲೇ ತಡೆದು, ’ನಿಮ್ಮ ನೆರವು ಸಾಕು ಮಿಸ್ಟರ್. ನೀವು ಇಲ್ಲಿಂದ ಹೋಗಬಹುದು.’ ಎಂದು ಒಳಗೂ ಕರೆಯಲಿಲ್ಲ.
ಪತಿ ರಾಮುವಿನ ಈ ವರ್ತನೆಯಿಂದ ಉಷಾ ಮಾತ್ರ ಅಚ್ಚರಿಗೊಂಡರು.ರಾಮು ಯಾಕೆ ಹೀಗೆ ಮಾಡಿದರು…? ಕೇಳಿಯೇ ಬಿಟ್ಟರು.
“ಹಿಂದಿನ ದಿನ ರಾತ್ರಿಗೆ ಚೈನೀಸ್ ರೆಸ್ಟೊರೆಂಟ್‌ನಲ್ಲಿ ಭೇಟಿಯಾದ ಜಾನಿ ಚಾಕೊ ಅವರು “ನನಗೆ ನಿನ್ನ ಹೆಂಡತಿ ಇಷ್ಟ” ಎಂದು ಹೇಳಿದ್ದರಿಂದ ಈ ರೀತಿ ಮಾಡಿದೆ” ಎಂದು ರಾಮು ಅವರು ಉಷಾಗೆ ನಿಜಸಂಗತಿ ತಿಳಿಸಿದರು.
ಅದೇನೆಂದರೆ ರಾಮುವಿಗಿಂತ ಮುಂಚೆಯೇ ಜಾನಿ ಚಾಕೋ ಅವರೂ ಉಷಾರನ್ನು ಪ್ರೀತಿಸುತ್ತಿದ್ದರು. ಇದರಿಂದ ರಾಮು ತುಂಬಾ ಚಡಪಡಿಸಿದ್ದರು. ಅದಕ್ಕೇ ರಾತ್ರಿ ಕ್ಲಬ್ಬಿಗೂ ಅಂದು ಹೋಗಿರಲಿಲ್ಲ. ನಂತರ ಉಷಾ ಅವರುಕೂಡ ರಾಮುವಿನ ಮುಂದೆ “ತನಗೂ ಜಾನಿಯ ಮೇಲೆ ಪ್ರೀತಿಯ ಭಾವನೆಗಳು ಬೆಳೆದಿವೆ” ಎಂದು ಒಪ್ಪಿಕೊಂಡರಂತೆ.


ರಾಮು ಮತ್ತು ಉಷಾ ನಡುವೆ ಅಲ್ಲಿಂದ ಟೆನ್ಶನ್ ಶುರುವಾಯಿತು:
ಈ ಎಲ್ಲ ಸಂಗತಿಗಳಿಂದ ಉಷಾ ಮತ್ತು ರಾಮು ನಡುವೆ ಮುಂದಿನ ಕೆಲವು ವಾರಗಳ ಕಾಲ ಟೆನ್ಷನ್ ಇತ್ತು. ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದರು. ಉಷಾ ಮತ್ತು ರಾಮು ಮದುವೆಯಾಗಿ ೫ ವರ್ಷವಾಗಿತ್ತು. ಈ ಸಮಯದಲ್ಲಿ, ಉಷಾ ಮತ್ತು ರಾಮುವಿನ ದಾಂಪತ್ಯ ಜೀವನವು ಏಕತಾನತೆಯಿಂದ ಕೂಡಿದೆ ಎಂದು ಅರಿತುಕೊಂಡರು.
ಇಂತಹ ಪರಿಸ್ಥಿತಿಯಲ್ಲಿ ಉಷಾ ಅವರು ರಾಮು ಅಥವಾ ಜಾನಿ ಇಬ್ಬರಲ್ಲಿ ಯಾರೊಂದಿಗೆ ಬದುಕಬೇಕು ಎಂದು ಗೊಂದಲಕ್ಕೆ ಸಿಲುಕಿದರು.
ಕೊನೆಗೆ ಅವರು ರಾಮುವಿನ ಬದಲು ಜಾನಿಯನ್ನು ಆಯ್ಕೆ ಮಾಡಿದರು ಮತ್ತು ಅವರು ತಮ್ಮ ಮೊದಲ ಪತಿಯಿಂದ ಬೇರ್ಪಟ್ಟು ಜಾನಿ ಚಾಕೊ ಅವರನ್ನು ಮದುವೆಯಾಗುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರು. ಇಬ್ಬರ ಪ್ರೇಮಕಥೆ ಕೊನೆಯ ಕ್ಷಣದವರೆಗೂ ಮುಂದುವರೆಯಿತು. ೮ ಜುಲೈ ೨೦೨೪ ರಂದು ಜಾನಿ ಅವರ ಮರಣದ ಸಮಯದಲ್ಲಿ ಉಷಾ ಅವರೊಂದಿಗೆ ಇದ್ದರು.
ಉಷಾ ಉತ್ತುಪ್ ಯಾರು?:
ಭಾರತೀಯ ಸಂಗೀತಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಉಷಾ ಉತ್ತುಪ್ ಅವರಿಗೆ ಪದ್ಮಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ. ಉಷಾ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಅವರು ಪಾಪ್ ಮತ್ತು ಜಾಝ್‌ನಿಂದ ಜಾನಪದ ಮತ್ತು ಶಾಸ್ತ್ರೀಯವರೆಗಿನ ಅನೇಕ ಬಾಲಿವುಡ್ ಹಿಟ್ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಉಷಾ ಅವರು ಹಿನ್ನೆಲೆ ಗಾಯಕಿಯಾಗಿದ್ದು, ಅವರು ೧೫ ಕ್ಕೂ ಹೆಚ್ಚು ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿ ಸುಲಭವಾಗಿ ಹಾಡಬಹುದಾದ ಸಾಮರ್ಥ್ಯ ಇದ್ದವರು. ಹಾಗಾಗಿಯೇ ಆಕೆಯನ್ನು ‘ಕ್ವೀನ್ ಆಫ್ ಇಂಡಿಯನ್ ಪಾಪ್’ ಎಂದು ಕರೆಯುತ್ತಾರೆ.