ಕ್ವಿಂಟಲ್’ಗೆ 50 ಸಾವಿರದ ಗಡಿ ದಾಟಿದ ಬ್ಯಾಡಗಿ ಮೆಣಸಿನಕಾಯಿ

ಬ್ಯಾಡಗಿ, ಡಿ 29- ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಇತಿಹಾಸದಲ್ಲಿ ಮೆಣಸಿನಕಾಯಿ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಮತ್ತೊಮ್ಮೆ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಯು ಐತಿಹಾಸಿಕ ದಾಖಲೆಯ ದರಕ್ಕೆ ಹೆಚ್ಚಿದೆ.
ಸೋಮವಾರ ಕ್ವಿಂಟಲ್’ಗೆ 50,111 ರೂಗಳಿಗೆ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಯು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಚಿನ್ನದ ಬೆಲೆಯಂತೆ ನಾಗಾಲೋಟ ದಲ್ಲಿ ಏರಿಕೆಯ ಹಾದಿಯಲ್ಲಿ ಸಾಗುವ ಮೂಲಕ ರೈತರ ಮೊಗದಲ್ಲಿ ಹರುಷದ ಅಲೆ ಮೂಡಿಸಿದೆ.
ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಎ.ಸಿ. ಕಟ್ಟೆಪ್ಪನವರ ಅವರ ದಲಾಲಿ ಅಂಗಡಿಯಲ್ಲಿ ಗದಗ ಜಿಲ್ಲೆಯ ಬೆಟಗೇರಿಯ ಮಲ್ಲಿಕಾರ್ಜುನ ಕರೇಮಿಸ್ಕಿ ಎನ್ನುವ ರೈತರು ಮಾರಾಟಕ್ಕೆ ಇಟ್ಟಿದ್ದ ಬ್ಯಾಡಗಿ ಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಲ್’ಗೆ 50,111 ರೂಗಳಂತೆ ಖರೀದಿಯಾಗಿದೆ. ಸ್ಥಳೀಯ ಖರೀದಿದಾರರಾದ ಆರ್. ಆರ್. ಆಲದಗೇರಿ ಅವರು ಮೆಣಸಿನಕಾಯಿಯನ್ನು ದಾಖಲೆಯ ದರಕ್ಕೆ ಖರೀದಿಸಿದ್ದಾರೆ. ಖಾರ ಪ್ರಿಯರಿಗಂತೂ ಮೆಣಸಿನಕಾಯಿ ಇನ್ನೂ ಬಲು ಖಾರವಾಗಿ ಪರಿಣಮಿಸಿದ್ದು, ಮೆಣಸಿನಕಾಯಿ ಬೆಲೆಯ ಅಬ್ಬರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
50ಸಾವಿರ ದಾಟಿದ ಬಂಗಾರದ ಬೆಳೆ :
ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯು ಮಾರಾಟದಲ್ಲಿ ತನ್ನ ಹಿಂದಿನ ಎಲ್ಲ ಮಾರಾಟದ ದಾಖಲೆಗಳನ್ನು ಮುರಿಯುತ್ತಿದ್ದು, ಸದ್ಯದ ಬೆಲೆ ಏರಿಕೆಯ ಗತಿಯು ಮುಂಬರುವ ದಿನಗಳಲ್ಲಿ ಇನ್ನೂ ದಾಖಲೆಯ ದರದ ಗಡಿಯನ್ನು ದಾಟುವ ನಿರೀಕ್ಷೆಯಿದೆ. ಕೊರೋನಾದಿಂದ ಕಂಗೆಟ್ಟಿದ್ದ ಮಾರುಕಟ್ಟೆಗೆ ಜೀವಕಳೆ ಹೆಚ್ಚಿದ್ದು, ಮೆಣಸಿನಕಾಯಿ ಬೆಳೆದ ರೈತರಂತೂ ಇದು ಕನಸೋ…ನನಸೋ…ಎಂದುಕೊಳ್ಳುವಂತಾಗಿದೆ.
ಒಟ್ಟಿನಲ್ಲಿ ರೈತರ ಮೊಗದಲ್ಲಿ ಸಂತಸದ ಅಲೆಯನ್ನು ಮೂಡಿಸಿರುವ ಮೆಣಸಿನಕಾಯಿ ತಿನ್ನುವ ಜನರಿಗೆ ಮಾತ್ರ ಕಣ್ಣೀರನ್ನು ತರಿಸಿದೆ.