ಕ್ವಾರಿಯಲ್ಲಿ ಮುಳುಗಿ ಯುವಕ ಸಾವು

ದೇವದುರ್ಗ.ಏ.೦೨-ತಾಲೂಕಿನ ಗಬ್ಬೂರು ಹೊರವಲಯದಲ್ಲಿ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಈಜಲು ತೆರಳಿದ್ದ ಯುವಕ ನೀರಲ್ಲಿ ಮುಳಗಿ ಗುರುವಾರ ಮೃತಪಟ್ಟಿದ್ದಾನೆ.
ಬಿ.ಗಣೇಕಲ್ ಗ್ರಾಮದ ಶಿವರಾಜ ಬಸವರಾಜ ಕೊರವರು (೨೫) ಮೃತ ಯುವಕರು. ನಾಲ್ವರು ಗೆಳೆಯರೊಂದಿಗೆ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಮಂಗಳವಾರ ಈಜಲು ತೆರಳಿ, ಕಾಣೆಯಾಗಿದ್ದಾನೆ. ಗೆಳೆಯರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗಬ್ಬೂರು ಠಾಣೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮೀನುವಾರರ ಸಹಕಾರದಲ್ಲಿ ಎರಡು ದಿನ ತೀವ್ರ ಹುಡುಕಾಟ ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ಶವ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಸಣ್ಣವೀರೇಶ ತಿಳಿಸಿದ್ದಾರೆ.
ತಾಲೂಕಿನಲ್ಲಿ ನೀರಲ್ಲಿ ಮುಳುಗಿ ಮೃತಪಡುವ ಘಟನೆಗಳು ಪದೇಪದೆ ನಡೆಯುತ್ತಿವೆ. ಗಬ್ಬೂರಿನಲ್ಲಿ ಗ್ರಾನೈಟ್ ಹಾಗೂ ರಸ್ತೆಗೆ ಮರಂ ಹಾಕಲು ಕ್ವಾರಿ ಕೊರೆಯಲಾಗಿದೆ. ಬೃಹತ್ ಹೊಂಡ ನಿರ್ಮಾಣವಾಗಿ ಈ ಅವಘಡ ನಡೆದಿದೆ. ಕೆಲ ದಿನಗಳ ಹಿಂದೆ ಜೋಳದಹೆಡಗಿಯಲ್ಲಿ ಮರಳು ಕ್ವಾರಿಯಲ್ಲಿ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದಳು. ಜಾಲಹಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಗುಂಡಲಬಂಡ ಜಲಪಾತದಲ್ಲೊಬ್ಬ, ವೀರಗೋಟದ ಕೃಷ್ಣಾ ನದಿಯಲ್ಲಿ ಬಾಲಕ ಮೃತಪಟ್ಟ ಘಟನೆ ಮಾಸುವೆ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.