ಕ್ಲೈಮಾಕ್ಸ್ ಹಂತಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ!’

ಶಿವಮೊಗ್ಗ, ನ. 7: ಕಳೆದ ಎರಡು ವರ್ಷಗಳ ಹಿಂದಷ್ಟೆ ಸಂಪೂರ್ಣ ಪಾಳು ಬಿದ್ದಿದ್ದ,
ಅನೈತಿಕ ಚಟುವಟಿಕೆಯ ಸ್ಥಳವಾಗಿದ್ದ, ಜಾನುವಾರುಗಳ ಮೇವಿನ ತಾಣವಾಗಿದ್ದ ಶಿವಮೊಗ್ಗ
ನಗರದ ಹೊರವಲಯ ಸೋಗಾನೆ ವಿಮಾನ ನಿಲ್ದಾಣ ಸ್ಥಳವೀಗ ಅಕ್ಷರಶಃ ನಳನಳಿಸುತ್ತಿದೆ! ಎಲ್ಲ
ಅಂದುಕೊಂಡಂತೆ ನಡೆದರೆ, ಇನ್ನೂ ಮೂರು ತಿಂಗಳಲ್ಲಿ ವಿಮಾನಗಳ ಹಾರಾಟವೇ
ಆರಂಭವಾಗಲಿದೆ..!!
ಹೌದು. ಕಳೆದೊಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಕಾಮಗಾರಿ,
ಕಳೆದೆರೆಡು ವರ್ಷಗಳಿಂದ ವೇಗ ಪಡೆದುಕೊಂಡಿದೆ. ಇದೀಗ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ.
ಡಿಸೆಂಬರ್ ವೇಳೆಗೆ ಎಲ್ಲ ಕೆಲಸಕಾರ್ಯಗಳು ಪೂರ್ಣಗೊಳ್ಳುವುದು ಬಹುತೇಕ
ನಿಶ್ಚಿತವಾಗಿದೆ.
ಸದ್ಯ ಹಗಲಿರುಳು ಕಾಮಗಾರಿ ನಡೆಯುತ್ತಿದೆ. ನೂರಾರು ಕಾರ್ಮಿಕರು, ತಂತ್ರಜ್ಞರು
ಕಾರ್ಯನಿರ್ವಹಿಸುತ್ತಿದ್ದಾರೆ. ಜನವರಿ ಮೊದಲ ವಾರದಲ್ಲಿ ಪ್ರಧಾನಮಂತ್ರಿ ನರೇಂದ್ರ
ಮೋದಿ ಅವರಿಂದ ನಿಲ್ದಾಣ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ. ಆದರೆ ಪ್ರಧಾನಿ
ಕಚೇರಿಯಿಂದ ಇನ್ನಷ್ಟೆ ದಿನಾಂಕ ನಿರ್ಧಾರವಾಗಬೇಕಾಗಿದೆ.
ಸದ್ಯದ ಕಾಮಗಾರಿ ಸ್ಥಿತಿ: 3.06 ಕಿ.ಮೀ. ಉದ್ದದ ರನ್ ವೇ ನಿರ್ಮಾಣದ ಕೊನೆಯ ಹಂತದ
ಕೆಲಸಗಳು ನಡೆಯುತ್ತಿವೆ. ಇದರ ಜೊತೆಜೊತೆಗೆ ಟರ್ಮಿನಲ್ ಕಟ್ಟಡ ನಿರ್ಮಾಣ
ಪ್ರಗತಿಯಲ್ಲಿದೆ. ಕಟ್ಟಡ ನಿರ್ಮಾಣ, ಹೊರಾಂಗಣ ಕೆಲಸಗಳು ಪೂರ್ಣಗೊಂಡಿವೆ. ಒಳಾಂಗಣ
ವಿನ್ಯಾಸ, ಗ್ಲಾಸ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.
ಎಟಿಸಿ ಕಟ್ಟಡ ನಿರ್ಮಾಣವೂ ಕೊನೆ ಹಂತದಲ್ಲಿದ್ದು, ಇಷ್ಟರಲ್ಲಿಯೇ ಅದರ ಕೆಲಸವೂ
ಪೂರ್ಣಗೊಳ್ಳಲಿದೆ. ವಿದ್ಯುತ್ ಸಂಪರ್ಕ ಮಾರ್ಗ, ಕುಡಿಯುವ ನೀರು ಪೂರೈಕೆ,
ನಿಲ್ದಾಣಕ್ಕೆ ಸಂಬಂಧಿಸಿದ ಎಲೆಕ್ಟ್ರಿಕ್ ಕಾಮಗಾರಿಗಳು ಕೂಡ ಭರದಿಂದ ಸಾಗುತ್ತಿದೆ.
ಉಳಿದಂತೆ ಅಗ್ನಿಶಾಮಕ ದಳ ಕಚೇರಿ ಮತ್ತೀತರ ಕಟ್ಟಡಗಳ ನಿರ್ಮಾಣ ಈಗಾಗಲೇ
ಅಂತ್ಯಗೊಂಡಿದೆ.
ಹಲವು ಇಲಾಖೆಗಳು ಏಕಕಾಲದಲ್ಲಿಯೇ, ಹತ್ತುಹಲವು ಕಾಮಗಾರಿಗಳನ್ನು ನಡೆಸುತ್ತಿರುವುದು
ಕಂಡುಬರುತ್ತಿದೆ. ನವೆಂಬರ್ ತಿಂಗಳಾಂತ್ಯಕ್ಕೆ, ಬಹುತೇಕ ಮುಖ್ಯ ಕಾಮಗಾರಿಗಳು ಅಂತಿಮ
ಹಂತ ತಲುಪಲಿವೆ ಎಂದು ಮೂಲಗಳು ಹೇಳುತ್ತವೆ.
ಶ್ರಮ: ಪಿಡಬ್ಲ್ಯೂಡಿ ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ. ಪಿಡಬ್ಲ್ಯೂಡಿಗೆ ಮಹತ್ತರ
ಯೋಜನೆಯ ಜವಾಬ್ದಾರಿವಹಿಸಿದಾಗ, ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು
ಮೂಡಿಸಿತ್ತು. ಆದರೆ ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಪಿಡಬ್ಲ್ಯೂಡಿ
ಅಚ್ಚುಕಟ್ಟಾಗಿ ವಿಮಾನ ನಿಲ್ದಾಣ ಕಾಮಗಾರಿ ನಿರ್ವಹಿಸುತ್ತಿದೆ.
ಅತ್ಯಂತ ಸಮರೋಪಾದಿಯಲ್ಲಿ ನಡೆಸುತ್ತಿದೆ. ಅದರಲ್ಲಿಯೂ ಕಾರ್ಯಪಾಲಕ ಅಭಿಯಂತರ ಸಂಪತ್
ಪಿಂಗ್ಳೆ ಅವರ ಕಾರ್ಯವೈಖರಿಗೆ  ಸರ್ಕಾರದ ಪ್ರಮುಖ ಸಚಿವರು ಮಾತ್ರವಲ್ಲದೆ, ಹಿರಿಯ
ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ಒಟ್ಟಾರೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗುವುದು, ಲೋಹದ ಹಕ್ಕಿಗಳು
ಹಾರಾಡುವುದು ಕನಸಿನ ಮಾತು ಎಂದೇ ಕೆಲ ವರ್ಷಗಳ ಹಿಂದೆ ಸಾರ್ವಜನಿಕ ವಲಯದಲ್ಲಿ
ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಲೋಹದ ಹಕ್ಕಿಗಳ ಹಾರಾಟಕ್ಕೆ ವೇದಿಕೆ
ಸಿದ್ದವಾಗುತ್ತಿದೆ. ಇದು ಜಿಲ್ಲೆಯ ಮಟ್ಟಿಗೆ  ಹೊಸ ಮೈಲಿಗಲ್ಲಿಗೆ
ಸಾಕ್ಷಿಯಾಗಲಿರುವುದಂತೂ ಸತ್ಯವಾಗಿದೆ.

Attachments area