ಕ್ಲಸ್ಟರ್ ಶಾಲೆಗಳ ಬಿಸಿಯೂಟ ಸಿಬ್ಬಂದಿಗೆ ತರಬೇತಿ

ಕೋಲಾರ,ಸೆ,೨೨- ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಅಡುಗೆ ಮನೆಯಲ್ಲಿ ಸುರಕ್ಷತೆಯ ಜತೆಗೆ ಶುಚಿತ್ವ ಕಾಪಾಡಿ, ಶುಚಿ,ರುಚಿಯಾದ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ ಎಂದು ಮಧ್ಯಾಹ್ನ ಉಪಹಾರ ಯೋಜನೆ ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಹ್ಮಣಿ ಕರೆ ನೀಡಿದರು.
ತಾಲ್ಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲ್ಲಿ ಕೋಲಾರ ತಾಪಂ,ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಥವಾ ಮಧ್ಯಾಹ್ನ ಉಪಹಾರ ಯೋಜನೆಯಡಿ ನರಸಾಪುರ,ಅರಾಭಿಕೊತ್ತನೂರು,ಬೆಳಮಾರನಹಳ್ಳಿ, ಸೂಲೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಬಿಸಿಯೂಟ ಸಿಬ್ಬಂದಿಗೆ ೨೦೨೩-೨೪ನೇ ಸಾಲಿನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಟ್ಟಾರೆ ಮಕ್ಕಳ ಆರೋಗ್ಯ ಕಾಪಾಡುವುದು ಶಿಕ್ಷಕರ ಜತೆಗೆ ಅಡುಗೆ ಸಿಬ್ಬಂದಿಯ ಜವಾಬ್ದಾರಿಯಾಗಿದೆ, ಶಾಲೆಯ ಅಡುಗೆ ಮನೆ ನಿಮ್ಮ ಮನೆಯ ಅಡುಗೆ ಮನೆ ಎಂದೇ ಭಾವಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ, ಅಡುಗೆ ಮನೆಯಲ್ಲಿ ಜೇಡರ ಬಲೆ, ಹಲ್ಲಿ, ಇಲಿ,ಹೆಗ್ಗಣಗಳು ಇರದಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದರು.
ಬಿಸಿಯೂಟ ಸಿಬ್ಬಂದಿಗೆ ವಿಮೆ ಸೌಲಭ್ಯ,ಸುರಕ್ಷತೆ ಕುರಿತು ಮಾಹಿತಿ ನೀಡಿದ ಅವರು, ಗುಣಮಟ್ಟದ ಆಹಾರಧಾನ್ಯ, ತರಕಾರಿ ಬಳಸಿ, ಶುದ್ದ ನೀರು ಅಡುಗೆಗೆ ಮತ್ತು ಮಕ್ಕಳ ಕುಡಿಯುವ ನೀರಿಗಾಗಿ ಬಳಸಿ ಎಂದು ಸೂಚಿಸಿದರು.
ರುಚಿಕರ ಮತ್ತು ಪೌಷ್ಟಿಕಾಂಶಭರಿತ ಆಹಾರ ಮಕ್ಕಳಿಗೆ ಕೊಡುವ ಕಾರ್ಯ ಇಲಾಖೆ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಮಕ್ಕಳನ್ನು ಸೇರಿಸಬೇಡಿ ಎಂದು ಸೂಚಿಸಿದರು.
ಶಾಲೆಗಳಿಗೆ ಅಗತ್ಯ ಆಹಾರಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ಒದಗಿಸಲಾಗುತ್ತಿದೆ, ದಾಸ್ತಾನು ಸದಾ ಪರಿಶೀಲಿಸಿಕೊಳ್ಳಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಅಡುಗೆಗೆ ಬಳಸಿ ಎಂದರು.
ಸಿಆರ್‌ಪಿ ಗೋವಿಂದ್ ಮಾತನಾಡಿ, ಬಿಸಿಯೂಟ ಸಿಬ್ಬಂದಿಗೆ ಆಹಾರ ಧಾನ್ಯ ಬಳಸಿ ಬಿಸಿ,ರುಚಿಯಾದ ಆಹಾರ ತಯಾರಿಕೆ ವಿಧಾನ, ಶುಚಿತ್ವ ಮತ್ತು ಅಡುಗೆ ಮನೆ ನಿರ್ವಹಣೆಯ ಜವಾಬ್ದಾರಿಗಳ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡುತ್ತಿದ್ದು, ಇದನ್ನು ಶಾಲೆಗಳಲ್ಲಿ ಅನುಸರಿಸಿ ಎಂದರು.
ಬಿಸಿಯೂಟ ತಯಾರಿಸಲು ಬಳಸುವ ಅಡುಗೆ ಅನಿಲ ಬಳಕೆ,ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದ ಅವರು, ಅಡುಗೆ ಮನೆಯಲ್ಲಿ ವಹಿಸಬೇಕಾದ ಸುರಕ್ಷತೆಗೆ ಒತ್ತು ನೀಡಿ, ನಿಗದಿತ ಅವಧಿಗೆ ಸ್ಟೋವ್‌ಗೆ ಒದಗಿಸಿರುವ ಅನಿಲ ಪೈಪ್ ಬದಲಾಯಿಸಿ, ಅಡುಗೆ ಮುಗಿಸಿ ಮನೆಗೆ ಹೋಗುವ ಮುನ್ನಾ ಸಿಲೆಂಡರ್‌ನ ರೆಗ್ಯುಲೇಟರ್ ಆಫ್ ಮಾಡಿ ಎಂದು ಸಲಹೆ ನೀಡಿದರು.
ಅಗ್ನಿ ಅವಘಢಗಳ ನಿರ್ವಹಣೆ, ಅಗ್ನಿ ಅನಾಹುತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಗೋಪಿನಾಥ್, ಎಸ್‌ಡಿಎಂಸಿ ಸದಸ್ಯ ಮಂಜುನಾಥ್, ಶಿಕ್ಷಕ ಡಾ.ಇಂಚರ ನಾರಾಯಣಸ್ವಾಮಿ, ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯ ಹೇಮಂತ್, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.