ಕ್ರೊಕೊಡೈಲ್ ಬೈಕ್ ಚಲಾಯಿಸಿದ ಪಾಂಡ್ಯ

ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್), ನ.೧೬- ಟಿ-ಟ್ವೆಂಟಿ ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿನ ಹತಾಶೆಯಿಂದ ಹೊರಬಂದಿರುವ ಟೀಮ್ ಇಂಡಿಯಾ ಇದೀಗ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯತ್ತ ಗಮನ ಹರಿಸಿದೆ. ಈ ನಡುವೆ ಸರಣಿಗೆ ಟೀಮ್ ಇಂಡಿಯಾ ಹಂಗಾಮಿ ನಾಯಕನಾಗಿ ಅಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾಗಿ ವೆಲ್ಲಿಂಗ್ಟನ್‌ನ ರಸ್ತೆಯಲ್ಲಿ ಕ್ರೊಕೊಡೈಲ್ ಬೈಕ್ ಸವಾರಿ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.
ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಅಲ್ಲದೆ ಹಾರ್ದಿಕ್ ಪಾಂಡ್ಯರನ್ನು ಸರಣಿಗೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಈ ನಡುವೆ ಹಾರ್ದಿಕ್ ಹಾಗೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವೆಲ್ಲಿಂಗ್ಟನ್‌ನ ರಸ್ತೆಯಲ್ಲಿ ಕ್ರೊಕೊಡೈಲ್ ಬೈಕ್‌ನಲ್ಲಿ ಮೋಜು ಮಸ್ತಿಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ನಾಯಕರು ತಮ್ಮ ತಮ್ಮ ತಂಡಗಳ ಜೆರ್ಸಿ ಧರಿಸಿ, ರೈಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ವೆಲ್ಲಿಂಗ್ಟನ್‌ನ ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಕ್ರೊಕೊಡೈಲ್ ಬೈಕ್‌ನಲ್ಲಿ ಸೈಕಲ್ ರೀತಿಯ ಎರಡು ಪೆಡಲ್‌ಗಳನ್ನು ಹೊಂದಿದ್ದು, ಇಬ್ಬರೂ ರೈಡರ್‌ಗಳು ಚಲಾಯಿಸುವ ವ್ಯವಸ್ಥೆ ಹೊಂದಿದೆ.