ಕ್ರೈಸ್ತರ ವಿರುದ್ಧದ ಹೇಳಿಕೆಯನ್ನು ಸಂಸದೆ ಶೋಭಾ ಹಿಂಪಡೆಯಲಿ

ಮಂಗಳೂರು, ಮೇ ೨೧- ಚರ್ಚ್ ಗಳಲ್ಲಿ ಕೋವಿಡ್ ಲಸಿಕೆ ಹಾಕಬಾರದು ಎಂಬುದಾಗಿ ಹೇಳಲಾಗುತ್ತಿದೆ ಎಂಬ ಸುಳ್ಳು ಹೇಳಿಕೆ ನೀಡಿ ಶಾಂತಿ – ಸಹಬಾಳ್ವೆ ಮತ್ತು ಸೇವೆಗೆ ಸಮರ್ಪಿಸಿಕೊಂಡಿರುವ ಕ್ರೈಸ್ತ ಸಮಾಜದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸಂಸಧೆ ಶೋಭಾ ಕರಂದ್ಲಾಜೆಯವರ ಮೇಲೆ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯ ನವೀನ್ ಆರ್. ಡಿಸೋಜ ಆಗ್ರಹಿಸಿದ್ದಾರೆ.
ಬೇಜವ್ದಾರಿಯುತ ಹೇಳಿಕೆ ನೀಡಿರುವ ಚುನಾಯಿತ ಜನಪ್ರತಿನಿಧಿ ಈ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಮತ್ತು ಸಮಸ್ತ ಕ್ರೈಸ್ತ ಸಮಾಜದ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕ್ರೈಸ್ತರು ಶಾಂತಿಪ್ರಿಯರು ಮಾತ್ರವಲ್ಲ, ದೇಶದ ಕಾನೂನನ್ನು ಗೌರವಿಸುವುದರಲ್ಲಿ ಮುಂಚೂಣಿಯಲ್ಲಿರುವವರು. ದೇಶದಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದವರು. ಕ್ರೈಸ್ತ ಭಗಿನಿಯರು ನಡೆಸುವ ಉನ್ನತ ಶಿಕ್ಷಣದ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದವರಿಗೆ ಈ ವಿಷಯ ಮತ್ತೆ ಹೇಳಬೇಕಾಗಿಲ್ಲ. ಕೋವಿಡ್ ಪ್ರಥಮ ಅಲೆಯ ಸಂದರ್ಭದಲ್ಲಿ ಕ್ರೈಸ್ತ ಚರ್ಚಿನ ಹಾಲ್ ಗಳನ್ನು ಪ್ರವಾಸಿ ಕಾರ್ಮಿಕರಿಗೆ ತೆರೆದಿಟ್ಟು, ಊಟೋಪಚಾರ ನೀಡಿರುವುದರಿಂದ ಹಿಡಿದು, ಲಸಿಕಾ ಅಭಿಯಾನವನ್ನು ಕ್ರೈಸ್ತರು ನಡೆಸುವ ಆಸ್ಪತ್ರೆಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಸುವುದರ ಜೊತೆಗೆ, ದ್ವಿತೀಯ ಅಲೆಯ ಆರಂಭದ ಹಂತದಲ್ಲೇ ನಗರದ ಹಾಗೂ ಗ್ರಾಮೀಣ ಭಾಗದ ಚರ್ಚುಗಳಲ್ಲಿ ಲಸಿಕಾ ಅಭಿಯಾನವನ್ನು ಏರ್ಪಡಿಸಿದ್ದು ಇದೆ. ಇದೆಲ್ಲವೂ ಮಾದ್ಯಮಗಳಲ್ಲಿ ವರದಿಯಾಗಿದೆ. ಹೀಗಿದ್ದೂ ಕ್ಷೇತ್ರದ ಜನರಿಗೆ ಸೂಕ್ತ ಸಮಯದಲ್ಲಿ ಲಸಿಕೆಯನ್ನು ಒದಗಿಸುವಲ್ಲಿ ಉಂಟಾದ ತಮ್ಮ ವೈಫಲ್ಯವನ್ನು ಶಾಂತಿ ಸಹಬಾಳ್ವೆಯ ಕ್ರೈಸ್ತ ಸಮಾಜದ ತಲೆಗೆ ಕಟ್ಟುತ್ತಿರುವುದು ಓರ್ವ ಚುನಾಯಿತ ಜನಪ್ರತಿನಿಧಿಗೆ ಯಕಕ್ಷಿತ್ ಶೋಭೆಯನ್ನು ತರುವುದಿಲ್ಲ ಎಂದು ಹೇಳಿದ್ದಾರೆ.