
ಮಾಸ್ಕೋ, ಆ.೧೩- ೨೦೧೪ರಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಕ್ರೈಮಿಯಾಗೆ ಸಂಪರ್ಕ ಕಲ್ಪಿಸುವ ಸೇತುವೆ (ಕೆರ್ಚ್ ಬ್ರಿಡ್ಜ್)ಯ ಮೇಲೆ ಉಕ್ರೇನ್ ಮತ್ತೆ ಕ್ಷಿಪಣಿ ದಾಳಿ ನಡೆಸಿದೆ. ಸಹಜವಾಗಿಯೇ ರಷ್ಯಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಆದರೆ ಘಟನೆಯಲ್ಲಿ ಸೇತುವೆಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ ಎನ್ನಲಾಗಿದೆ.
ಇನ್ನು ಸೇತುವೆ ಮೇಲೆ ದಾಳಿ ನಡೆಸಿದ ಆರೋಪದ ಬಗ್ಗೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಸ್-೨೦೦ ಕ್ಷಿಪಣಿಗಳನ್ನು ಸೇತುವೆಯ ಮೇಲೆ ಹಾರಿಸಲಾಗಿದ್ದು, ಆದರೆ ಯಾವುದೇ ಹಾನಿಯಾಗಲಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಇಂತಹ ಅನಾಗರಿಕ ಕ್ರಮಗಳಿಗೆ ಯಾವುದೇ ಸಮರ್ಥನೆ ಇಲ್ಲ ಮತ್ತು ಅವುಗಳಿಗೆ ಉತ್ತರಿಸದೆ ಹೋಗುವುದಿಲ್ಲ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಶನಿವಾರ ಟೆಲಿಗ್ರಾಮ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಇತ್ತೀಚಿಗಿನ ತಿಂಗಳುಗಳಲ್ಲಿ ಇದು ಕ್ರೈಮಿಯಾಗೆ ಸಂಪರ್ಕ ಕಲ್ಪಿಸುವ, ಸುಮಾರು ೧೨ ಮೈಲಿಗಳಷ್ಟು ಉದ್ದವಿರುವ ಕೆರ್ಚ್ ಸೇತುವೆಯ ಮೇಲೆ ಕನಿಷ್ಠ ಮೂರನೇ ದಾಳಿಯಾಗಿದೆ. ೨೦೧೪ರಲ್ಲಿ ಕ್ರೈಮಿಯಾ ಪ್ರದೇಶವನ್ನು ಉಕ್ರೇನ್‌ನಿಂದ ರಷ್ಯಾ ವಶಪಡಿಸಿಕೊಂಡ ಬಳಿಕ ಇದರ ನಿರ್ಮಾಣ ಕಾರ್ಯ ನಡೆದಿದ್ದು, ೨೦೧೮ರಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉದ್ಘಾಟಿಸಿದ್ದರು. ಅಲ್ಲದೆ ಕ್ರೈಮಿಯಾವನ್ನು ಸಂಪರ್ಕ ಕಲ್ಪಿಸಲು ಇದು ಪ್ರಮುಖ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಇದಂದು ಪ್ರಮುಖ ಸೇತುವೆಯಾಗಿದ್ದು, ಹೆಚ್ಚಿನ ಜನತೆ ಇದನ್ನು ಬಳಸುತ್ತಿದ್ದಾರೆ. ಮಾರ್ಗದರ್ಶಿಯಾಗಿರುವ ಈ ಕ್ಷಿಪಣಿಯನ್ನು ಶೀತಲ ಸಮರದ ಯುಗದ ಸಮಯದಲ್ಲಿ ಅಭಿವೃದ್ದಿಪಡಿಸಲಾಗಿತ್ತು. ಆ ಸಮಯದಲ್ಲಿ ಅವುಗಳನ್ನು ವಿಮಾನಗಳನ್ನು ಹೊಡೆದುರುಳಿಸಲು ಅಭಿವೃದ್ದಿ ಪಡಿಸಲಾಗಿದ್ದರೂ ಇದೀಗ ಇವುಗಳಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ತಯಾರಿಸಲಾಗಿದೆ ಎಂದು ಉಕ್ರೇನಿಯನ್ ವೆಬ್‌ಸೈಟ್ ಯೂರೋಮೈಡನ್ ಪ್ರೆಸ್ ಕಳೆದ ತಿಂಗಳು ವರದಿ ಮಾಡಿದೆ.