ಮಾಸ್ಕೊ, ಜು.೨೦- ರಷ್ಯಾ ಸ್ವಾಧೀನ ಪಡಿಸಿಕೊಂಡಿರುವ ಕ್ರೈಮಿಯಾ ಪ್ರಾಂತದಲ್ಲಿನ ಕಿರೊವ್ಸ್ಕ್‌ನ ಸೇನಾ ಸಿಬಂದಿ ತರಬೇತಿ ಕೇಂದ್ರದಲ್ಲಿ ಬುಧವಾರ ಬೆಂಕಿ ದುರಂತ ಸಂಭವಿಸಿದ್ದು ೨೦೦೦ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆಲ ದಿನಗಳ ಹಿಂದೆ ಕ್ರೈಮಿಯಾದ ಸೇತುವೆಯ ಮೇಲೆ ದಾಳಿ ನಡೆಸಿದ್ದ ಉಕ್ರೇನ್ ಇದೀಗ ಇಲ್ಲಿನ ಸೇನಾ ನೆಲೆ ಮೇಲೆ ಕೂಡ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯುತ್ತರವಾಗಿ ರಷ್ಯಾ ಮತ್ತಷ್ಟು ದಾಳಿಯನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ ಎನ್ನಲಾಗಿದೆ. ಅಧಿಕಾರಿಗಳು ಬೆಂಕಿಯ ಕಾರಣವನ್ನು ಇನ್ನೂ ಬಹಿರಂಗಪಡಿಸದಿದ್ದರೂ ಉಕ್ರೇನ್ ಕಡೆಯಿಂದ ಇದು ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಆದರೆ ಈ ಸ್ಥಳದಲ್ಲಿ ಸ್ಫೋಟದ ಸದ್ದು ಕೇಳಿಸಿದೆ ಎಂದು ರಷ್ಯಾದ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕಿರೋವ್‌ಸ್ಕಿ ಜಿಲ್ಲೆಯಲ್ಲಿನ ಮಿಲಿಟರಿ ತರಬೇತಿ ಕೇಂದ್ರದಲ್ಲಿ ಬೆಂಕಿ ದುರಂತದ ಬಳಿಕ ಇದರ ಸಮೀಪದ ಸುಮಾರು ೨ ಸಾವಿರ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಮೂಲಕ ಹಾದುಹೋಗುವ ತವ್ರಿಡಾ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.