ಕ್ರೈಡಾಯ್‌ನಿಂದ ಆಂಬುಲೆನ್ಸ್ ಹಸ್ತಾಂತರ

ಮಂಗಳೂರು, ಮೇ ೧೯- ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಮನವಿಯ ಮೇರೆಗೆ ಕ್ರೆಡಾಯ್ ಮಂಗಳೂರು ಘಟಕವು ನೀಡುವ ಆಂಬ್ಯುಲೆನ್ಸ್ ಅನ್ನು ಶಾಸಕರಿಗೆ ಕ್ರೆಡಾಯ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕ್ರೆಡಾಯ್ ಸಂಸ್ಥೆಯು ವಾರ್ ರೂಂ ತೆರೆದು ಜನರ ಸೇವೆಯಲ್ಲಿ ತೊಡಗಿಸಿರುವುದು ಶ್ಲಾಘನೀಯ. ಅಭಿವೃದ್ಧಿಯ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡಿರುವ ಕ್ರೆಡಾಯ್ ಸಂಸ್ಥೆಯು ಸಂಕಷ್ಟದ ಪರಿಸ್ಥಿತಿಯಲ್ಲೂ ಕೂಡ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ನನ್ನ ಮನವಿಯ ಮೇರೆಗೆ ನೀಡಿರುವ ಈ ಆಂಬ್ಯುಲೆನ್ಸ್ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸೇವೆಗೆ ನೀಡಲಾಗುವುದು ಎಂದರು.
ಬಳಿಕ ಮಾತನಾಡಿದ ಕ್ರೆಡಾಯ್ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕೋವಿಡ್ ಸೋಂಕಿತರ ಸೇವೆಗಾಗಿ ಕ್ರೆಡಾಯ್ ಮಂಗಳೂರು ಘಟಕವು ಕೋವಿಡ್ ವಾರ್ ರೂಂ ಮೂಲಕ ಸೇವೆ ನೀಡುತ್ತಿದೆ. ವಾರ್ ರೂಂ ಪೂರ್ಣ ಪ್ರಮಾಣದಲ್ಲಿ ಕಾರ‍್ಯನಿರ್ವಹಿಸುತ್ತಿದೆ. ವಾರ್ ರೂಂನಲ್ಲಿ ಕೊರೊನಾ ಸೋಂಕಿತರಿಗೆ ಹಾಗೂ ಅವರ ಸೇವೆಯಲ್ಲಿರುವರಿಗೆ ಅವಶ್ಯಕತೆಗಳಿಗೆ ಸ್ಪಂದಿಸಲಿದೆ. ಆಂಬುಲೆನ್ಸ್, ಪಿಪಿಇ ಕಿಟ್, ಶವಸಂಸ್ಕಾರಕ್ಕೆ ಧನ ಸಹಾಯ ಮಾಡುತ್ತಿದೆ. ಮಾತ್ರವಲ್ಲದೆ ಶವಸಂಸ್ಕಾರ ಮಾಡುವವರಿಗೆ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಇದೀಗ ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಮನವಿಯ ಮೇರೆಗೆ ಒಂದು ಆಂಬ್ಯುಲೆನ್ಸ್ ವಾಹನವನ್ನು ಶಾಸಕರಿಗೆ ಹಸ್ತಾಂತರಿಸುತ್ತಿದ್ದೇವೆ ಎಂದು ಹೇಳಿದರು.
ಕ್ರೆಡಾಯ್, ಕೆನರಾ ಚೇಂಬರ್ಸ್, ನಿರ್ಮಾಣಕಾರರ ಅಸೋಸಿಯೇಷನ್, ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಮೂಲಕ ಲೇಡಿಗೋಷನ್ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಶೀಘ್ರದಲ್ಲೇ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ಕ್ರೆಡಾಯ್ ಕಾರ್ಯದರ್ಶಿ ಪ್ರಶಾಂತ್ ಸನಿಲ್, ನವೀನ್ ಕರ್ಡೋಜಾ, ವಿನೋದ್ ಪಿಂಟೋ, ಗುರುಮೂರ್ತಿ ರಾವ್, ಜಿತೇಂದ್ರ ಕೊಟ್ಟಾರಿ ಮತ್ತಿತ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.