
ಮುಂಬೈ,ಆ.೧- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು ೧೭ ಮಂದಿ ಸಾವನ್ನಪ್ಪಿದ್ದು ಮೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಡರಾತ್ರಿ ಸಂಭವಿಸಿದೆ. ಸಂತ್ರಸ್ತರೆಲ್ಲರೂ ವಲಸೆ ಕಾರ್ಮಿಕರೆಂದು ಗುರುತಿಸಲಾಗಿದೆ.
ಮೃತಪಟ್ಟವರಲ್ಲಿ ಐವರು ಎಂಜಿನಿಯರ್‌ಗಳು ಮತ್ತು ೧೧ ಕಾರ್ಮಿಕರು ಸೇರಿದ್ದಾರೆ. ಮೃತದೇಹಗಳನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಲಾಂಚಿಂಗ್ ಯಂತ್ರ ಕುಸಿದು ಈ ಅವಘಢ ಸಂಭವಿಸಿದೆ.. ಸ್ಥಳದಲ್ಲಿ ರಕ್ಷಣಾ ಕಾರ್ಯಮುಂದುವರಿದಿದೆ. ಶಹಾಪುರದ ಖುತಾಡಿ ಸರ್ಲಾಂಬೆ ಗ್ರಾಮದಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂರನೇ ಹಂತದ ಕಾಮಗಾರಿ ವೇಳೆ ಈ ಘಟನೆ ನಡೆದಿದೆ. ಕ್ರೇನ್ ೯೦ ರಿಂದ ೧೦೦ ಅಡಿ ಎತ್ತರದಿಂದ ಕುಸಿದು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲ ೧೭ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಮೂವರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎನ್‌ಡಿಆರೆಫ್ ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು ಮತ್ತು ಹೆದ್ದಾರಿ ಆಡಳಿತ ಸಿಬ್ಬಂದಿ ಕ್ರೇನ್‌ಗಳ ಸಹಾಯದಿಂದ ಗರ್ಡರ್‍ಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದಿದ್ದಾರೆ.ಇನ್ನೂ ಆರು ಮಂದಿ ಸಿಲುಕಿರುವ ಶಂಕೆ ಇದೆ. ಲಭ್ಯವಿರುವ ಮಾಹಿತಿ ಪ್ರಕಾರ ರಾತ್ರಿ ೨೫ ರಿಂದ ೨೭ ಮಂದಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.೭೦೧-ಕಿಲೋಮೀಟರ್ ಉದ್ದದ ಸಮೃದ್ಧಿ ಮಹಾಮಾರ್ಗ್, ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ ಎಂದೂ ಕರೆಯುತ್ತಾರೆ, ಇದು ಎರಡು ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ.ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ನಡೆಸುತ್ತಿದೆ, ಇದರ ಮೊದಲ ಹಂತದ ಕಾಮಗಾರಿಯಲ್ಲಿ ನಾಗ್ಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತದೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಮುಖ್ಯಮಂತ್ರಿ ಏಕನಾಥ್‌ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್, ಅಜಿತ್‌ಪವಾರ್ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಸಚಿವ ದಡಾಜಿ ಭುಸೆ ಸ್ಥಳ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಪರಿಹಾರ ಘೋಷಣೆ: ತನಿಖೆಗೆ ಆದೇಶ
ದುರ್ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ ೫ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಘಟನೆಯ ಬಗ್ಗೆ ತಜ್ಞರಿಂದ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಸಂತಾಪ:ಪರಿಹಾರ
ಥಾಣೆಯಲ್ಲಿ ಸಂಭವಿಸಿದ ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಮಹಾರಾಷ್ಟ್ರದ ಶಹಾಪುರದಲ್ಲಿ ಸಂಭವಿಸಿದ ಭೀಕರ ದುರ್ಘಟನೆಯಿಂದ ನೋವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಮುಂದಿನ ಸಂಬಂಧಿಕರಿಗೆ ೨ ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ೫೦ ಸಾವಿರ ಪರಿಹಾರ ಪ್ರಕಟಿಸಿದ್ಧಾರೆ.