ಕ್ರೂಸ್ ಹಡಗು ಸಂಚಾರಕ್ಕೆ ನಿಷೇಧ

ಆಮ್‌ಸ್ಟರ್‌ಡ್ಯಾಮ್ (ನೆದರ್ಲೆಂಡ್), ಜು.೨೧- ಪ್ರವಾಸಿಗರ ಸಂಖ್ಯೆಯನ್ನು ಕಡಿತಗೊಳಿಸುವ ಹಾಗೂ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಇದೀಗ ನೆದರ್ಲೆಂಡ್ ಸರ್ಕಾರ ಇದೀಗ ರಾಜಧಾನಿ ಆಮ್‌ಸ್ಟರ್‌ಡ್ಯಾಮ್ ಸರಹದ್ದಿನಲ್ಲಿ ಅತ್ಯಂತ ವೇಗವಾಗಿ ಪ್ರಯಾಣಿಸುವ ಕ್ರೂಸ್ ಹಡಗುಗಳಿಗೆ ನಿಷೇಧ ಹೇರಿದೆ. ಇದರ ಪರಿಣಾಮ ಆಮ್‌ಸ್ಟರ್‌ಡ್ಯಾಮ್‌ನ ಮುಖ್ಯ ರೈಲು ನಿಲ್ದಾಣದ ಬಳಿ ಐಜೆ ನದಿಯ ಕೇಂದ್ರ ಕ್ರೂಸ್ ಟರ್ಮಿನಲ್ ಮುಚ್ಚಲ್ಪಡಲಿದೆ.
ಜಗತ್ತಿನಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ಬಳಸಲ್ಪಡುವ ದೇಶಗಳಲ್ಲಿ ನೆದರ್ಲೆಂಡ್ ಕೂಡ ಒಂದಾಗಿದ್ದು, ಅತ್ಯಂತ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ವಾರ್ಷಿಕವಾಗಿ ಬರೊಬ್ಬರಿ ೨೦ ಮಿಲಿಯನ್ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದರೂ ಮಾಲಿನ್ಯದ ದೃಷ್ಟಿಯಿಂದ ನಗರಕ್ಕೆ ಹಾನಿಯಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಸುಸ್ಥಿರ ಅಭಿವೃದ್ದಿಗಾಗಿ ನೆದರ್ಲೆಂಡ್ ಸರ್ಕಾರ ಅನೇಕ ಪರಿಸರ ಪರ ನೀತಿಗಳನ್ನು ತೆಗೆದುಕೊಂಡಿದ್ದು, ಇದರ ಭಾಗವೆಂಬಂತೆ ಇದೀಗ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನ ಆಸುಪಾಸಿನಲ್ಲಿ ಕ್ರೂಸ್ ಹಡಗುಗಳ ಸಂಚಾರಕ್ಕೆ ನಿಷೇಧ ಹೇರಿದೆ. ಇತ್ತೀಚಿಗಿನ ವರ್ಷಗಳಲ್ಲಿ ರಾಜಧಾನಿ ಆಮ್ಸರ್‌ಡ್ಯಾಮ್‌ಗೆ ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಇದು ಇಲ್ಲಿನ ಪರಿಸರಕ್ಕೆ ತೊಡಕುಂಟು ಮಾಡು, ಮಾಲಿನ್ಯಕ್ಕೆ ಕೂಡ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಆಮ್ಸರ್‌ಡ್ಯಾಮ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ರೂಸ್ ಹಡಗುಗಳ ಸಂಚಾರದಿಂದ ವಾಯುಮಾಲಿನ್ಯದ ಜೊತೆಗೆ ಜಲಮಾಲಿನ್ಯ ಕೂಡ ಆಗುತ್ತಿದೆ ಎಂಬ ಆರೋಪ ಕೂಡ ಬಲವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜಧಾನಿ ಆಸುಪಾಸಿನಲ್ಲಿ ಕ್ರೂಸ್ ಹಡುಗಳ ಸಂಚಾರಕ್ಕೆ ತಡೆಹಿಡಿದಿದೆ. ಅಲ್ಲದೆ ಇಲ್ಲಿನ ರೆಡ್ ಲೈಟ್ ಜಿಲ್ಲೆಯ ಬೀದಿಗಳಲ್ಲಿ ಗಾಂಜಾ ಧೂಮಪಾನವನ್ನು ಕೂಡ ನಿಷೇಧಿಸಲು ಆಡಳಿತ ಮಂಡಳಿ ಚಿಂತಿಸುತ್ತಿದೆ ಎನ್ನಲಾಗಿದೆ.