ಕ್ರೂಜರ್ ಪಲ್ಟಿ : ಅಥಣಿ ತಾಲೂಕಿನ ಬಳ್ಳಿಗೇರಿ ಮೂಲದ ಮೂರು ಜನ ಮಹಿಳಾ ಕೂಲಿ ಕಾರ್ಮಿಕರ ಸಾವು

ಅಥಣಿ: ಮೇ.12: ನೆರೆಯ ಮಹಾರಾಷ್ಟ್ರದ ಜತ್ತ ಸಾಂಗೋಲಾ ರಸ್ತೆಯಲ್ಲಿ ಕ್ರೂಸರ್ ವಾಹನವೊಂದು ಪಲ್ಟಿಯಾದ ಪರಿಣಾಮ, ಅದರಲ್ಲಿದ್ದ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ 3 ಜನ ಮಹಿಳಾ ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಧಾರಣ ಘಟನೆ ಶನಿವಾರ ಮುಂಜಾನೆ ಸಂಭವಿಸಿದ್ದು, ಇದಲ್ಲದೆ ಸುಮಾರು 15 ಜನರಿಗೆ ಗಂಭೀರ ಗಾಯಗಳಾಗಿ ಮಿರಜ್ ಮತ್ತು ಸಾಂಗ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಅಪಘಾತದಲ್ಲಿ ಮೃತಪಟ್ಟವರನ್ನು ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಾದೇವಿ ಚೌಗಲಾ, ಗೀತಾ ದೊಡ್ಡಮನಿ, ಕಸ್ತೂರಿ ತಾಂವಶಿ ಎಂದು ಗುರುತಿಸಲಾಗಿದೆ. ಇವರ ಕುಟುಂಬದಲ್ಲಿ ಅಕ್ರಂದನ ಮುಗಿಲುಮಟ್ಟಿದೆ.
ಈ ಘಟನೆಯಲ್ಲಿ ದುರ್ಮರಣ ಹೊಂದಿದ ಮಹಿಳೆಯರು ಸೇರಿದಂತೆ ಸುಮಾರು 20 ಜನ ಈ ಕ್ರೂಜರ್ ವಾಹನದಲ್ಲಿ ನೆರೆಯ ಮಹಾರಾಷ್ಟ್ರದ ಸಂಗೋಲಾಕ್ಕೆ ಕೂಲಿ ಕೆಲಸಕ್ಕಾಗಿ ಪ್ರತಿದಿನ ವಾಹನದಲ್ಲಿ ತೆರಳುತ್ತಿದ್ದರು. ಪ್ರತಿದಿನದಂತೆ ಈ ದಿನವೂ ಕೂಡ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕ್ರೂಜರ್ ವಾಹನದ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ವಾಹನ ಪಾಲಿಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂರು ಜನ ಮಹಿಳೆಯರು ದುರ್ಮರಣ ಹೊಂದಿದ್ದಾರೆ. ತೀವ್ರ ಗಾಯಗೊಂಡವರನ್ನು ಸಂಗೋಲಾ ಮತ್ತು ಮಿರಾಜ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಸಂಗೋಲಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬರಗಾಲ ಮತ್ತು ನರೇಗಾ ವೈಪಲ್ಯ ಇಂತಹ ದುರ್ಘಟನೆಗೆ ಕಾರಣ :
ರಾಜ್ಯ ಸರ್ಕಾರ ಬರಗಾಲ ಪರಿಹಾರ ಘೋಷಣೆ ಮಾಡಿದ್ದರು ಕೂಡ ಯಾವುದೇ ಬರಗಾಲ ಕಾಮಗಾರಿಗಳು ಆರಂಭವಾಗಿಲ್ಲ, ಇದಲ್ಲದೆ ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಅಡಿ ಕೂಲಿ ಕೆಲಸ ಸಿಗದೇ ಇರುವುದಕ್ಕೆ ಗಡಿಭಾಗದ ಅನೇಕ ಹಳ್ಳಿಯ ಮಹಿಳೆಯರು ಮತ್ತು ಪುರುಷರು ನೆರೆಯ ಮಹಾರಾಷ್ಟ್ರದ ಜತ್ತ್, ಸಾಂಗ್ಲಿ, ಕೊಲ್ಲಾಪುರ, ರತ್ನಗಿರಿ, ಸಾಂಗುಲಾ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಕೂಲಿ ಕೆಲಸ ಅರಶಿಕೊಂಡು ಹೋಗುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ದುಡಿಯಲು ಹೋಗುತ್ತಿರುವ ಈ ಸಂದರ್ಭದಲ್ಲಿ ಇಂತಹ ದುರ್ಘಟನೆಗಳು ನಡೆದಾಗ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಆದ್ದರಿಂದ ನಮ್ಮ ರಾಜ್ಯದ ಮಹಿಳೆಯರಿಗೆ ಮತ್ತು ಪುರುಷರಿಗೆ ರಾಜ್ಯ ಸರ್ಕಾರ ಬರಗಾಲ ಕಾಮಗಾರಿಗಳನ್ನು ಮತ್ತು ನರೇಗಾ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ರಾಜ್ಯ ಸರ್ಕಾರವನ್ನ ಆಗ್ರಹಿಸಿದ್ದಾರೆ.