ಕ್ರೀಯಾಶೀಲತೆ ಹಾಗೂ ಏಕಾಗ್ರತೆ ಅಧ್ಯಯನ ಕೈಗೊಂಡರೇ ಮಾತ್ರ ಯಶಸ್ಸು ಸಾಧ್ಯಃ ಮ್ಯಾಗೇರಿ

ವಿಜಯಪುರ, ಡಿ.26-ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಮುಟ್ಟಲು ಸದಾ ಪರಿಶ್ರಮ ತಾಳ್ಮೆ, ಶ್ರದ್ಧೆ, ದಕ್ಷತೆ, ಪ್ರಾಮಾಣಿಕತೆ, ಕ್ರೀಯಾಶೀಲತೆ ಹಾಗೂ ಏಕಾಗ್ರತೆ ಅಧ್ಯಯನ ಕೈಗೊಂಡರೇ ಮಾತ್ರ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ|| ಐ.ಜೆ. ಮ್ಯಾಗೇರಿ ಹೇಳಿದರು.
ಅವರು ನಗರದ ರುಡ್‍ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ವಿಜಯಪುರ ತಾಲೂಕಿನ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕøತಿ ವೇದಿಕೆ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಶೇಕಡಾ 90ಕ್ಕಿಂತಲೂ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಎಲ್ಲಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಗುರಿ ಇದ್ದರೆ ಮಾತ್ರ ಗೆಲುವು ಸಾಧಿಸಬಹುದು. ಆದರೆ ವಿದ್ಯಾರ್ಥಿಗಳು ಜೀವನದಲ್ಲಿ ನಿಕರವಾದ ಗುರಿ ಹೊಂದಿರಬೇಕು. ಆದರೆ ನಾನು ಆಯ್.ಎ.ಎಸ್., ಆಯ್.ಪಿ.ಎಸ್., ಇಂಜಿನೀಯರ್, ಡಾಕ್ಟರ್ ಆಗಬೇಕು ಎಂಬ ಇಡೀ ಜೀವನವನ್ನೇ ಕಳೆಯಬಾರದು. ದೇಶಕ್ಕೆ ಅನ್ನ ನೀಡುವ ಕೃಷಿಕನಾಗಬಹುದು, ಶಿಕ್ಷಕನಾಗಬಹುದು ಮನುಷ್ಯನಿಗೆ ಜೀವನ ಸಾಗಿಸಲು ನೂರಾರು ಮಾರ್ಗಗಳಿವೆ ಅವುಗಳನ್ನು ಅನುರಿಸಿಕೊಂಡು ವಿದ್ಯಾರ್ಥಿಗಳಾದವರು ದೇಶಕ್ಕೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರ ಮೂಲಕ ಹೆತ್ತ ತಂದೆ ತಾಯಿಗಳನ್ನು ಗುರುಗಳಿಗೆ ಕೀರ್ತಿ ತರಬೇಕು. ಉತ್ತಮ ಅಂಕ ಗಳಿಸಿದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಈ ಕಾರ್ಯಕ್ರಮ ಸಮಾಜದ ಪ್ರಗತಿಗೆ ಪೂರಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎ.ಎಸ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಪುರಸ್ಕಾರ ಅಗತ್ಯವಾಗಿದೆ. ಸಮಾಜದಲ್ಲಿ ಹಲವಾರು ಸಂಘಟನೆಗಳು ಸಮುದಾಯಗಳು ಪುರಸ್ಕಾರವನ್ನು ಒಂದೇ ಜಾತಿ ಸಮುದಾಯಕ್ಕೆ ವರ್ಗಕ್ಕೆ ಪುರಸ್ಕಾರ ನೀಡುವ ಮೂಲಕ ಜಾತಿ ವ್ಯವಸ್ಥೆಗೆ ಪುಷ್ಪಿ ನೀಡುತ್ತವೆ. ವಿದ್ಯಾರ್ಥಿಗಳಿಗೂ ಕೂಡಾ ಜಾತಿಯ ಜಾಡು ಭೂತ ಅಂಟಿಕೊಳ್ಳದೆ ಜಾತ್ಯಾತೀತವಾಗಿ ಬದುಕಬೇಕು. ಆಹೇರಿ ಬಸವ ಸಾಹಿತ್ಯ ವೇದಿಕೆ ಕಳೆದ 16 ವರ್ಷಗಳಿಂದ ಎಲ್ಲಾ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಜಾತ್ಯಾತೀತ ಸಮಾಜ ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದೆ. ಇದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಜಯಪುರ ನಗರದ ಹಿರಿಯ ಗಣ್ಯರಾದ ಡಿ.ಎಸ್. ಗುಡ್ಡೋಡಗಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯ ಅಮೂಲ್ಯವಾದ ಸಂಪತ್ತು. ಅದನ್ನು ಮತ್ತೆ ಮತ್ತೆ ಮರಳಿ ಪಡೆಯಲಾಗದು. ಗಾಳಿ ಬಿಟ್ಟಾಗ ತೂರಿಕೊ ಎಂಬ ಸಾಮಾಜಿಕ ವಾಣಿಯಂತೆ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕಾದರೆ ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು. ಇಂದಿನ ವೈಜ್ಞಾನಿಕ ತಾಂತ್ರಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದಕ್ಕು ಉತ್ತಮ ಫಲಿತಾಂಶ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರ ರೂಡಿಸಿಕೊಳ್ಳಲು ಬಸವ, ಗಾಂಧಿ, ಅಂಬೇಡ್ಕರ, ವಿವೇಕಾನಂದ ರಂತಹ ವಾಗ್ಮಿಗಳ ಇತಿಹಾಸವನ್ನು ಓದಿ ಅಧ್ಯಯನ ಮಾಡಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಬೇಕೆಂದರು.
ನಗರದ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ಬಗಲಿ, ಅಲ್ ಅಮೀನ್ ಮೆಡಿಕಲ್ ಕಾಲೇಜ ಧರ್ಮದರ್ಶಿಗಳಾದ ರಿಯಾಜ ಫಾರೂಕಿ, ಸಿಕ್ಯಾಬ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಎಮ್.ಆರ್. ಜೋಶಿ ಮಾತನಾಡಿದರು.
ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ರಾಜೇಂದ್ರ ಜೈನಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಂಡೆಪ್ಪ ತೇಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಎಲ್ಲಾ ಸಮುದಾಯದ 55 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ವಾತಿ ಶಿರಶ್ಯಾಡ ಪ್ರಾರ್ಥಿಸಿದರು. ಚುಟುಕು ಸಾಹಿತ್ಯ ಪರಿಷತ್ ಕೋಶಾಧ್ಯಕ್ಷರಾದ ಸಂತೋಷಕುಮಾರ ನಿಗಡಿ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಜಗದೀಶ ಸಾಲಳ್ಳಿ ನಿರೂಪಿಸಿದರು. ಚುಟುಕು ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಶರಣಗೌಡ ಪಾಟೀಲ, ಚೇತನ ಪಟ್ಟಣಶೆಟ್ಟಿ, ಅರುಣ ಶಿವಣಗಿ, ಮಲ್ಲಿಕಾರ್ಜುನ ಹತ್ತಿ, ಬಸವರಾಜ ಸನಾಪ ವಿಶ್ವನಾಥ ಕುಲಕರ್ಣಿ, ಶಿವಾಜಿ ಮೋರೆ, ಗುರುರಾಜ ತೇಲಿ, ಮುಂತಾದವರು ಉಪಸ್ಥಿತರಿದ್ದರು.