ಕ್ರೀಡೆಯಿಂದ ಮಾನಸಿಕ ದೈಹಿಕ ಸದೃಢತೆ

ಆನೇಕಲ್. ಮಾ. ೨೯- ಯುವಕರು ಕ್ರೀಡಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡರಾಗುತ್ತಾರೆ ಎಂಬುದಾಗಿ ಕೋನಪ್ಪನ ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಚಂದ್ರು ರವರು ತಿಳಿಸಿದರು. ಅವರು
ಅವರು ತಾಲ್ಲೂಕಿನ ಕೋನಪ್ಪನ ಅಗ್ರಹಾರ ಗ್ರಾಮದ ಬಳಿಯಿರುವ ಪಿ.ಇ.ಎಸ್. ಕಾಲೇಜು ಮೈದಾನದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಟ್ರೋಪಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು . ಪ್ರಾಚೀನ ಕಾಲದಿಂದಲೂ ನಾವು ಭಾರತೀಯರು ಕ್ರೀಡಾ ಪ್ರಿಯರು ಮತ್ತು ಕ್ರೀಡಾ ಆಸಕ್ತಿಗಳಾಗಿದ್ದೆವು ಎಂಬುದಕ್ಕೆ ನಮ್ಮ ಪುರಾಣ ಪುಣ್ಯಕತೆಗಳಲ್ಲಿ ಉಲ್ಲೇಖಗಳು ಇವೆ.ನಮ್ಮ ದೇಶೀಯ ಕ್ರೀಡೆಗಳಾದ ಕಬಡ್ಡಿ, ಖೋಖೋ, ಮಲ್ಲಕಂಬ, ಕತ್ತಿವರಸೆ ಮುಂತಾದವುಗಳನ್ನು ನಮ್ಮ ಪೂರ್ವಜರು ಆಡುತ್ತಿದ್ದರು. ಇಂತಹ ಐತಿಹಾಸಿಕ ಹಿನ್ನಲೆ ಇರುವ ಹೆಮ್ಮೆಯ ಕ್ರೀಡೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಶೆಟ್ಟಿ ಪಾಳ್ಯ ಮೂರ್ತಿ ಮಾತನಾಡಿ ಕ್ರೀಡೆಗಳು ಯುವಕರಲ್ಲಿ ಸ್ವಾಭಿಮಾನವನ್ನು ಬೆಳೆಸುವುದಕ್ಕೆ ಹೆಚ್ಚಿನ ಶಕ್ತಿ ತುಂಬುತ್ತದೆ ಹಾಗೂ ಆರೋಗ್ಯಕರ ಚಿಂತನೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಹಕಾರಿಯಾಗುತ್ತದೆ ಎಂದರು. ಮುಖ್ಯವಾಗಿ ಅಂಬೇಡ್ಕರ್ ರವರ ಆಶಯಗಳನ್ನು ಯುವಕರಲ್ಲಿ ಪಸರಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಯುವಕರು ಅಂಬೇಡ್ಕರ್ ರವರ ವಿಚಾರ ಧಾರೆಗಳನ್ನು, ತತ್ವ ಸಂದೇಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ಕಟ್ಟಲು ಮುಂದಾಗಬೇಕು ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸತೀಶ್. ಮೋಹನ್ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.