ಕ್ರೀಡೆಯಿಂದ ಮನೋಲ್ಲಾಸ, ಆರೋಗ್ಯ ಲಭ್ಯ

ಜೇವರ್ಗಿ: ಆ.30:ಕ್ರೀಡೆಯಲ್ಲಿ ತೊಡಗುವುದರಿಂದ ವ್ಯಾಯಾಮದ ಜೊತೆಗೆ ಮನಸ್ಸಿನ ಉಲ್ಲಾಸ ಹಾಗೂ ದೇಹವು ಆರೋಗ್ಯವಾಗಿರುತ್ತದೆ ಎಂದು ವಿಜ್ಞಾನ ಶಿಕ್ಷಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಅವರು ಜೇವರ್ಗಿ ನಗರದ ಮಹಾಲಕ್ಷ್ಮೀ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಬಿ.ಇಡಿ ಕಾಲೇಜು ವತಿಯಿಂದ ರೂಢಿ ಪಾಠಗಳ ವೀಕ್ಷಕರಾಗಿ ತೆರಳಿ, ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿ, ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ಪ್ರಾಚೀನ ಕಾಲದಿಂದ ಈವರೆಗೂ ತನ್ನದೇ ಆದ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ. “ಕ್ರೀಡೆ ಮನುಷ್ಯನ ಸೋಮಾರಿತನವನ್ನು ತೊಡೆದು ಹಾಕಿ ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತದೆ”. ಹಾಗಾಗಿ ಆರೋಗ್ಯವಂತ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕ್ರೀಡೆಗಳು ವಹಿಸುವ ಪಾತ್ರ ಮಹತ್ವದ್ದಾಗಿರುತ್ತದೆ. ಕ್ರೀಡೆ ಎಂಬುದು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠನನ್ನಾಗಿಸುವ ಚಟುವಟಿಕೆ ಮಾತ್ರವಲ್ಲ, ಮನೋರಂಜನೆಯನ್ನು ಪಡೆಯಲು ಮನುಷ್ಯ ಕಂಡುಕೊಂಡ ಅತ್ಯುತ್ತಮ ಮಾರ್ಗವೂ ಹೌದು. ಶಿಸ್ತನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ಕ್ರೀಡೆಗಳು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾಗುತ್ತದೆ. ಭಾರತದಲ್ಲಿ ಬಹುತೇಕ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಹುಟ್ಟುತ್ತವೆ. ಆದರೆ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಅವರಿಗೆ ಸೂಕ್ತವಾದ ತರಬೇತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ನಿಜಕ್ಕೂ ಅವರು ಭವ್ಯ ಭಾರತದ ಕ್ರೀಡಾ ರತ್ನಗಳಾಗಿ ಬೆಳೆಯುತ್ತಾರೆ. ಕ್ರೀಡೆಯಿಂದ ನಿರಾಸಕ್ತಿ, ಸೋಮಾರಿತನಗಳು ದೂರವಾಗುತ್ತವೆ ಮತ್ತು ಏಕಾಗ್ರತೆ, ಉತ್ಸಾಹಗಳು ಪುಟಿದೇಳುತ್ತವೆ. ಕ್ರೀಡೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುವುದಿಲ್ಲ ಎಂಬ ಭಾವನೆಯನ್ನು ತೊಡೆದು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಧುಮುಕುವಂತೆ ಮಾಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಸ್ತುತ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖಗೊಂಡಿವೆಯಾದರೂ ಇನ್ನಷ್ಟು ಶ್ರಮಗಳನ್ನು ಹಾಕುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಲೇಖಕ ದೇವಿಂದ್ರ ವಿಶ್ವಕರ್ಮ ಹೇಳಿದರು. ಈ ಸಂದರ್ಭದಲ್ಲಿ ಆದರ್ಶ ಪ್ರಶಿಕ್ಷಣಾರ್ಥಿಯಾದ ಐಶು(ಆಶಾ), ತಾಯಮ್ಮ, ಶಿವಾನಿ, ಅಶ್ವಿನಿ, ರೇಷ್ಮಾ, ಭಾಗ್ಯಶ್ರೀ, ಶರಣಗೌಡ, ಶಿವರಾಜ್ ಸೇರಿ ಮುಂತಾದವರು ಹಾಜರಿದ್ದರು.