ಕ್ರೀಡೆಯಲ್ಲಿ ನಿರ್ಣಾಯಕರ ಪಾತ್ರ ಅತ್ಯಂತ ಪ್ರಮುಖ


ಬ್ಯಾಡಗಿ,ಮಾ.15: ಪ್ರತಿಯೊಂದು ಕ್ರೀಡೆಯಲ್ಲೂ ನಿರ್ಣಾಯಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ನಿರ್ಣಾಯಕರು ಸಹ ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ಅಂತಾರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಎಚ್.ಎಲ್. ಶ್ಯಾಮಣ್ಣಗೌಡ ಕರೆ ನೀಡಿದರು.
ಪಟ್ಟಣದ ಎಸ್’ಜೆಜೆಎಂ ತಾಲೂಕಾ ಕ್ರೀಡಾಂಗಣದಲ್ಲಿ ರವಿವಾರ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಮತ್ತು ತೀರ್ಪುಗಾರರ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಒಂದು ದಿನದ ತೀರ್ಪುಗಾರರ ತರಬೇತಿ ಕಾರ್ಯಾ?ಗಾರವನ್ನುದ್ದೇಶಿಸಿ ಮಾತನಾಡಿದ ಅವರು ನಿರ್ಣಾಯಕರ ಗೌರವದ ಸ್ಥಾನಕ್ಕೆ ತಕ್ಕಂತೆ ನಮ್ಮ ನಿರ್ಣಯಗಳು ಕೂಡ ಹೊರಬರಬೇಕು. ಇದರಿಂದ ಕ್ರೀಡಾಪಟುಗಳು ನಮ್ಮ ಮೇಲೆ ವಿಶ್ವಾಸವಿಡಲು ಸಾಧ್ಯವಿದೆ, ಎಂದರು.
ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಎಲ್. ಮಹ್ಮದ ಇಸ್ಮಾಯಿಲ್ ಮಾತನಾಡಿ, ಕಬಡ್ಡಿ ಪಂದ್ಯಾವಳಿಗಳಲ್ಲಿ ಜಗಳವಿಲ್ಲದೇ ಆಟ ಮುಕ್ತಾಯವಾಗುವುದಿಲ್ಲ ಎಂಬ ಕೆಟ್ಟ ಸಂದೇಶವೊಂದು ಕಬಡ್ಡಿ ಆಟಕ್ಕೆ ಕಪ್ಪು ಚುಕ್ಕೆಯಾಗಿ ರವಾನೆಯಾಗುತ್ತಿದೆ, ಕಬಡ್ಡಿ ತೀರ್ಪುಗಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರೀಡೆಯಲ್ಲಿ ಯಾವುದೇ ಪಕ್ಷಪಾತ ಮಾಡದೇ ನ್ಯಾಯಾಧಿಕಾರಿಯಂತೆ ತೀರ್ಪು ನೀಡುವ ಮೂಲಕ ಗೌರವವನ್ನು ಕಾಪಾಡಬೇಕಲ್ಲದೇ ಕ್ರೀಡೆಯ ಮೇಲಿರುವ ಕಪ್ಪುಚುಕ್ಕೆಯನ್ನು ಅಳಿಸುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಪ್ರತಿ ಮೂರು ವರ್ಷಕೊಮ್ಮೆ ಕಬಡ್ಡಿ ನಿರ್ಣಾಯಕರ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು, ಕಾರ್ಯಾಗಾರದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ತೀರ್ಪುಗಾರರು ನೊಂದಣಿ ಮಾಡಿಕೊಂಡರಲ್ಲದೇ ಎಚ್.ಎಲ್.ಶಾಮಣ್ಣಗೌಡ ಹಾಗೂ ಎಲ್. ಮಹ್ಮದ ಇಸ್ಮಾಯಿಲ್ ಅವರಿಂದ ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ವಹಿಸಿದ್ದರು. ವೇದಿಕೆಯಲ್ಲಿ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಂಜಣ್ಣ ಎಲಿ, ಖಜಾಂಚಿ ಗಂಗಣ್ಣ ಎಲಿ, ಸದಸ್ಯರಾದ ರಾಜೇಶ್ ಮಾಳಗಿ, ಮಾರುತಿ ಜನ್ನು, ನಿವೃತ್ತ ದೈಹಿಕ ಪರಿವೀಕ್ಷಕ ಬಿ.ಎಚ್.ಎನ್. ರಾವಳ, ಪುರಸಭೆ ಸದಸ್ಯ ಸುಭಾಸ ಮಾಳಗಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಸವರಾಜಪ್ಪ, ಮಹದ್ಮಲಿ ಜಿನ್ನಾ ಹಲಗೇರಿ, ಎ.ಬಿ.ಕಲ್ಮನಿ, ಬಿ.ಎರ್.ಹುಲ್ಮನಿ, ಎಂ.ಆರ್.ಕೋಡಿಹಳ್ಳಿ, ಬಿ.ಸಿ.ದಾಣಗಲ್, ರಮೇಶ ಕರಬಣ್ಣನವರ, ಮಂಜುಳಾ ಭಜಂತ್ರಿ ಇನ್ನಿತರರು ಉಪಸ್ಥಿತರಿದ್ದರು, ಎ.ಟಿ.ಪೀಠದ ಸ್ವಾಗತಿಸಿದರು, ಕ್ರೀಡಾಧಿಕಾರಿ ಎಚ್.ಬಿ.ದಾಸರ ನಿರೂಪಿಸಿದರು, ಬಸವರಾಜ ಹೊಸಪೇಟಿ ವಂದಿಸಿದರು.