ಕ್ರೀಡೆಯಲ್ಲಿ ತೊಡಗುವುದರಿಂದ ಉತ್ತಮ ಆರೋಗ್ಯ

ದಾವಣಗೆರೆ.ನ.೧೬:  ಸದಾ ಒತ್ತಡದಲ್ಲಿ ಕೆಲಸ ಜನನ ನಿರ್ವಹಿಸುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ತಿಳಿಸಿದರು.ದಾವಣಗೆರೆ ಜಿಲ್ಲಾ ಪೊಲೀಸ್  ಇಲಾಖೆಯಿಂದ  ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರೆ ದೇಹಕ್ಕೆ ಕಸರತ್ತು ನೀಡಿದಂತಾಗುತ್ತದೆ. ಇತರರಿಗೂ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದಂತೆ ಅಗುತ್ತದೆ. ಕಾರಣ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಭಾಗವಹಿಸುವಂತೆ ಕರೆ ನೀಡಿದರು.ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಹೊನ್ನಾಳಿಯ ಸಾಮಾಜಿಕ ಅರಣ್ಯ ವಲಯದ ಅರಣ್ಯ ರಕ್ಷಕ ಪರ್ವತಾರೋಹಿ ಸಿ.ವಿಕ್ರಮ್, ಹಸಿರೀಕರಣ ನಮ್ಮ ಮುಖ್ಯ ಧ್ಯೇಯವಾಗಬೇಕು. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ತಿಳಿಸಿದರು.ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಇದ್ದರು.