ಕ್ರೀಡೆಗಳು ಮಕ್ಕಳಿಗೆ ದೈಹಿಕವಾಗಿ ಸದೃಢಗೊಳ್ಳಲು ಸಹಕಾರಿ

ಕೆ.ಆರ್.ಪೇಟೆ.ಜು.28: ಕ್ರೀಡೆಗಳು ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗಿವೆ ಆದ್ದರಿಂದ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ಮಿತ್ರ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಬೂಕನಕೆರೆ ವಿಜಯ್ ರಾಮೇಗೌಡ ಅವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸಂತೆಬಾಚಹಳ್ಳಿ ಹೋಬಳಿ ಅಘಲಯ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ರೀಡೆಗಳು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವಾಗಿದೆ ಹಾಗೂ ನಮ್ಮ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು. ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತರುವ ಕೆಲಸವನ್ನು ಶಿಕ್ಷಕರು ಮಾಡಿದರೆ ಸಾಕು ಮಕ್ಕಳು ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಕ್ರೀಡೆಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಬರಲು ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಹಾಗೂ ದೈಹಿಕ ಶಿಕ್ಷಕರ ಕೊರತೆಯನ್ನು ಸರ್ಕಾರ ನೀಗಿಸಬೇಕು. ಮಕ್ಕಳು ಟಿವಿ ಸಿನಿಮಾ ಮೊಬೈಲ್ ಗಳ ಕಡೆ ಗಮನ ಹರಿಸುವುದನ್ನು ಬಿಟ್ಟು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗಳ ಬಗ್ಗೆ ಹೆಚ್ಚಾಗಿ ಭಾಗವಹಿಸಬೇಕು. ತಾಲೂಕು, ಜಿಲ್ಲಾ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧಿಸುವುದರ ಮೂಲಕ ನೀವು ಹುಟ್ಟಿದ ಊರು, ನಿಮ್ಮ ತಂದೆತಾಯಿಗಳಿಗೆ,ನೀವು ಓದಿದ ಶಾಲೆ ಹಾಗೂ ಗುರುಹಿರಿಯರಿಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿರುವ ಎಲ್ಲಾ ಮಕ್ಕಳು ನಿಮ್ಮ ಮಕ್ಕಳಿದ್ದಂತೆ ಆದ್ದರಿಂದ ತೀರ್ಪುಗಾರರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಶಿಕ್ಷಕರಿಗೆ ಕಿವಿಮಾತನ್ನು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಸೀತಾರಾಂ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಶ್ರೀಧರ್, ತಾಲೂಕು ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ ಕೆ ಶಿವರಾಮೇಗೌಡ, ಗ್ರಾ.ಪಂ.ಮಾಜಿ ಸದಸ್ಯ ಎ.ಬಿ.ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಹೇಮಲೋಕೇಶ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಕೃಷ್ಣಸಿಂಗ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಪದ್ಮೇಶ್, ಸಂಘಟನಾ ಕಾರ್ಯದರ್ಶಿ ಮಂಜು, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೊರೆಸ್ವಾಮಿ, ಪ್ರಭುಕುಮಾರ್, ಇಸಿಒ ನೀಲಮಣಿ, ಕೃಷ್ಣನಾಯಕ್, ಹೇಮಣ್ಣ, ವಿಜಯನಾರಾಯಣ್ ಸೇರಿದಂತೆ ಮತ್ತಿತರರಿದ್ದರು.