ಕ್ರೀಡೆಗಳು ನಾಯಕತ್ವ ಗುಣ ಬೆಳೆಸುತ್ತವೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಆ4: ಕ್ರೀಡೆಗಳು ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಆ ಮೂಲಕ ಅವರು ಸ್ವಾಸ್ಥ್ಯ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಚೂರಿ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಗುಂಡೇನಹಳ್ಳಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆಯ ನಿಯಮಗಳನ್ನು ಪಾಲಿಸಿ ಕ್ರೀಡಾಪಟುಗಳು ತಮ್ಮ ಕೌಶಲ್ಯವನ್ನು ಪ್ರದರ್ಶನ ಮಾಡಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.
ಕ್ರೀಡಾಕೂಟ ಉದ್ಘಾಟಿಸಿದ ಡಾ.ಬಸವರಾಜ ವೀರಾಪುರ ಮಾತನಾಡಿ, ಕ್ರೀಡೆಗಳು ಗ್ರಾಮೀಣ ಮಕ್ಕಳ ಬದುಕನ್ನು ದೈಹಿಕವಾಗಿ ಸದೃಢಗೊಳಿಸುತ್ತವೆ.ಆದರೆ, ಅವರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಸರ್ಕಾರಗಳು ಉದ್ಯೋಗ ನೀಡುವುದರ ಮೂಲಕ ಮಾಡಬೇಕಾಗಿದೆ ಎಂದರು.
ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಮನಸ್ಸನ್ನು ಪ್ರಪುಲ್ಲಗೊಳಿಸುತ್ತವೆ. ಮೊಬೈಲ್’ನಲ್ಲಿ ಬರುವ ಕ್ರಿಕೆಟ್ ಆಡದೇ ಕ್ರೀಡಾಂಗಣದಲ್ಲಿ ದೈಹಿಕವಾಗಿ ಬೆವರನ್ನು ಬಸಿದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತವ್ವ ದೇಶಗತ್ತಿ, ಎಸ್ಡಿಎಂಸಿ ಉಪಾಧ್ಯಕ್ಷ ಮಾಲತೇಶ ಲಮಾಣಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಶಪ್ಪ ಹುಲ್ಯಾಳ, ದೈಹಿಕ ಶಿಕ್ಷಣಾಧಿಕಾರಿ ವಸಂತಕುಮಾರ ಪಮ್ಮಾರ, ಮುಖಂಡರಾದ ಮುತ್ತಣ್ಣ ಶಿಗ್ಗಾವಿ, ರವಿ ಹೊಸಮನಿ, ಶಿವಪುತ್ರಪ್ಪ ಅಗಡಿ, ಎಸ್ಡಿಎಂಸಿ ಪದಾಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಶಿಕ್ಷಕರಾದ ಮಲ್ಲಪ್ಪ ಕರೇಣ್ಣನವರ ಸ್ವಾಗತಿಸಿದರು. ವಸಂತಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.