ಕ್ರೀಡೆಗಳಿಂದ ಮಕ್ಕಳಲ್ಲಿ ಉತ್ತಮ ಆರೋಗ್ಯ

ಕೋಲಾರ,ಜು,೨೧:ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯದ ಜತೆಗೆ ಪಠ್ಯ ಕಲಿಕೆಗೂ ಮಕ್ಕಳು ಕ್ರಿಯಾಶೀಲರಾಗಿರಲು ಸಹಕಾರಿಯಾಗಲಿದೆ ಎಂದು ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲಶ್ರೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜೋಡಿಕೃಷ್ಣಾಪುರದ ಪ್ರೇವಸೇವಾ ಸಾಗರ ವಿದ್ಯಾಲಯದ ಆವರಣದಲ್ಲಿ ೨೦೨೩-೨೪ನೇ ನರಸಾಪುರ ಹೋಬಳಿ ಮಟ್ಟದ ಪ್ರಾಥಮಿಕ,ಪ್ರೌಢಶಾಲಾ ಹಂತದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಸೋಲುಗೆಲುವನ್ನು ಸಮನಾಗಿ ಸ್ವೀಕರಿಸಿ, ಸೋತವರು ಕುಗ್ಗದೇ ಮುಂದಿನ ದಿನಗಳಲ್ಲಿ ಸಾಧನೆ ಮಾಡುವ ಆಶಾಭಾವನೆಯೊಂದಿಗೆ ಅಭ್ಯಾಸ ಮುಂದುವರೆಸಿ ಎಂದ ಅವರು, ಕ್ರೀಡಾಮನೋಭಾವ ವೃದ್ದಿಗೂ ಕ್ರೀಡಾ ಕೂಟ ಮಕ್ಕಳಿಗೆ ನೆರವಾಗಲಿ ಎಂದು ಆಶಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರೀಡೆಗಳಿಗೆ ಸಾಕಷ್ಟು ಅನುದಾನ ಬಳಸುತ್ತಿವೆ, ಇದರ ಜತೆಗೆ ಗ್ರಾಮ ಪಂಚಾಯಿತಿ ಹಂತದಲ್ಲೂ ಗ್ರಾಮೀಣ ಶಾಲೆಗಳಿಗೆ ಕ್ರೀಡಾಮೈದಾನ ನಿರ್ಮಾಣಕ್ಕೆ ನರೇಗಾದಲ್ಲಿ ಅನುದಾನವೂ ಇದೆ ಎಂದು ತಿಳಿಸಿದರು.
ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡಿ ಅವರನ್ನು ಅಂಕಗಳಿಸುವ ಯಂತ್ರಗಳಂತೆ ಪರಿಗಣಿಸುವ ಪರಿಪಾಠವನ್ನು ಪೋಷಕರು ಬಿಡಬೇಕು, ಸರ್ಕಾರಿ ಶಾಲೆಗಳಲ್ಲೂ ಇಂದು ಉತ್ತಮ ಶಿಕ್ಷಕರಿದ್ದು, ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಜಿಲ್ಲೆಯನ್ನು ಪ್ರತಿನಿಧಿಸಿ ಸಾಧನೆ ಮಾಡಿ ಗೌರವ ತರಬೇಕು ಎಂದು ಕೋರಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಮಾತನಾಡಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು,
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಇಸಿಒಗಳಾದ ರಾಘವೇಂದ್ರ, ಕೆ.ಶ್ರೀನಿವಾಸ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ನಾಗರಾಜ್, ಅಶ್ವಥ್ಥನಾರಾಯಣ, ಕ್ರೀಡಾಕೂಟದ ಅಧ್ಯಕ್ಷ ಎನ್.ಬಿ.ಶ್ರೀನಿವಾಸ್, ಕಾರ್ಯದರ್ಶಿ ನರಸಾಪುರ ಶಾಲೆಯ ಸೊಣ್ಣೆಗೌಡ, ಕೆ.ಟಿ.ನಾಗರಾಜ್, ಮುನಿಯಪ್ಪ, ಸಿಆರ್‌ಪಿ ಗೋವಿಂದ್, ಜಿ.ಶ್ರೀನಿವಾಸ್, ಮುರಳಿ ಮೋಹನ್,ಆರ್.ನಾಗರಾಜ್, ಲಾಲ್ ಅಂಡ್ ಲಾಲ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಭಗವಾನ್ ದಾಸ್, ಕಾರ್ಯದರ್ಶಿ ಬೆಂಜಮೀನ್ ಮತ್ತಿತರರು ಪಾಲ್ಗೊಂಡಿದ್ದರು. ಅಚ್ಚಟ್ನಹಳ್ಳಿ ಗ್ರಾಮದ ಮಂಜುನಾಥ್ ನಾಯ್ಡು ಊಟದ ವ್ಯವಸ್ಥೆ ಮಾಡಿದ್ದರು.
ಕ್ರೀಡಾಕೂಟದಲ್ಲಿ ನರಸಾಪುರ ಹೋಬಳಿಯ ೨೫ ಸರ್ಕಾರಿ,ಅನುದಾನಿತ, ಅನುದಾನರಹಿತ ಹಿರಿಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.