ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ

ಬೆಂಗಳೂರು,ನ.೧- ಕ್ರೀಡಾಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮೆರೆದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಕಳೆದ ೩ ವರ್ಷಗಳಿಂದ ಪ್ರಶಸ್ತಿಗಳನ್ನು ರಾಜ್ಯಸರ್ಕಾರ ಘೋಷಿಸಿರಲಿಲ್ಲ. ಹಾಗಾಗಿ, ಈ ಬಾರಿ ಏಕಲವ್ಯ ಪ್ರಶಸ್ತಿ ಪ್ರಕಟಿಸಿರುವುದು ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.
ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಗೈದಿರುವುದನ್ನು ಪರಿಗಣಿಸಿ ಈ ಬಾರಿ ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಇದು ಸಂಪೂರ್ಣ ಪಾರದರ್ಶಕವಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
೨೦೧೭ನೇ ಸಾಲಿನಲ್ಲಿ ೧೪ ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ, ೧೦ ಮಂದಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.
೨೦೧೮ನೇ ಸಾಲಿನಲ್ಲ ೯ ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ ಹಾಗೂ ೭ ಮಂದಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟಿಸಿದೆ.
೨೦೧೯ನೇ ಸಾಲಿನಲ್ಲ ೮ ಮಂದಿಗೆ ಏಕಲವ್ಯ, ಇಬ್ಬರಿಗೆ ಜೀವಮಾನ ಸಾಧನೆ ಮತ್ತು ೯ ಮಂದಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.
೨೦೧೮ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಖ್ಯಾತ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್, ೨೦೧೯ನೇ ಸಾಲಿಗೆ ವೇದಾಕೃಷ್ಣಮೂರ್ತಿ ಹಾಗೂ ಮಯಾಂಕ್ ಅಗರ್‍ವಾಲ್ ಅವರ ಹೆಸರುಗಳನ್ನು ಘೋಷಿಸಲಾಗಿದೆ.
ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ೧೯೯೨ ರಿಂದ ರಾಜ್ಯದ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದ್ದು, ಈ ಪ್ರಶಸ್ತಿ ೨ ಲಕ್ಷ ರೂ. ನಗದು ಹಾಗೂ ಏಕಲವ್ಯ ಕಂಚಿನ ಮೂರ್ತಿಯನ್ನು ಒಳಗೊಂಡಿದೆ.
ಕ್ರೀಡಾಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿವರ್ಷ ಇಬ್ಬರು ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ೧.೫೦ ಲಕ್ಷ ನಗದು ಬಹುಮಾನ. ಸ್ಕ್ರೋಲ್‌ಪ್ರಶಸ್ತಿ ಪದಕ ನೀಡಿ ಸನ್ಮಾನಿಸಲಾಗುವುದು.