ಕ್ರೀಡಾ ಯೋಜನೆ ಸದುಪಯೋಗಕ್ಕೆ ಕರೆ

ಬ್ಯಾಡಗಿ, ನ21: ಕ್ರೀಡಾಪಟುಗಳಿಗೆ ಸೂಕ್ತ ತರಬೇತಿಯೊಂದಿಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ಕ್ರೀಡಾಪಟುವೂ ಹೊಂದುವಂತಾಗಬೇಕೆಂದು ಕ್ರೀಡಾಂಗಣ ಗುಣಮಟ್ಟ ಪರಿಶೀಲನಾ ಸಮಿತಿ ಸದಸ್ಯರಾದ ಅರ್ಜುನ್ ಪ್ರಶಸ್ತಿ ವಿಜೇತ ಡಾ. ಸಿ. ಹೊನ್ನಪ್ಪಗೌಡ ಹೇಳಿದರು.
ಪಟ್ಟಣದ ಶ್ರೀಜಯದೇವ ಜಗದ್ಗುರು ಮುರುಘರಾಜೇಂದ್ರ ತಾಲೂಕಾ ಕ್ರೀಡಾಂಗಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರ ಆಸಕ್ತ ಕ್ರೀಡೆಗಳಿಗೆ ಸೂಕ್ತ ತರಬೇತುದಾರರಿಲ್ಲದೇ ಕ್ರೀಡಾಪಟುಗಳು ಕ್ರೀಡೆಯಿಂದ ಹಿಂದೆ ಸರಿಯುವಂತಾಗಿದೆ. ಈ ದಿಶೆಯಲ್ಲಿ ಅವರಿಗೆ ಸೂಕ್ತ ಸೌಲಭ್ಯಗಳೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಬೆಳೆಯುವಂತೆ ಮಾಡಬೇಕಾಗಿದೆ ಎಂದರು.
ಕ್ರೀಡಾ ವಸತಿ ನಿಲಯಕ್ಕೆ ಶಿಫಾರಸು..!!
ಬ್ಯಾಡಗಿ ತಾಲೂಕು ಮೊದಲಿನಿಂದಲೂ ಕಬಡ್ಡಿ ಕ್ರೀಡೆಗೆ ಉತ್ತಮ ಹೆಸರನ್ನು ಹೊಂದಿದ್ದು, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಸ್ವಂತ ನಿವೇಶನ ಹೊಂದಿರುವ ರಾಜ್ಯದ ಏಕೈಕ ಜಿಲ್ಲಾ ಸಂಸ್ಥೆಯಾಗಿದೆ. ಇದರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ನೂರಾರು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡಿದ್ದಲ್ಲದೇ ಕಬಡ್ಡಿಯಲ್ಲೇ ಡಾಕ್ಟರೇಟ್ ಪಡೆದ ಕ್ರೀಡಾಪಟುಗಳು ಜಿಲ್ಲೆಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಕ್ರೀಡಾ ಇಲಾಖೆಯು ಪಟ್ಟಣದಲ್ಲಿ ವಸತಿ ನಿಲಯ ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ತರಬೇತುದಾರ ಜಮಾಅಹ್ಮದ್, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಪದಾಧಿಕಾರಿಗಳಾದ ಗಂಗಣ್ಣ ಎಲಿ, ಮಲ್ಲಿಕಾರ್ಜುನ ಬಳ್ಳಾರಿ, ಎಂ.ಆರ್.ಕೋಡಿಹಳ್ಳಿ, ಮಹಿಳಾ ತರಬೇತುದಾರರಾದ ಅಕ್ಷತಾ ಹಾಗೂ ಮಂಜುಳ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.