ಕ್ರೀಡಾ ಯೋಜನೆಗಳ ಸದುಪಯೋಗ ಪಡೆಯಿರಿ: ಶಿವಯ್ಯ ಸ್ವಾಮಿ

ಬೀದರ್:ಮಾ.27: ಯುವಕರು ವಿವಿಧ ಯೋಜನೆಗಳ ಸದುಪಯೋಗ ಪಡೆದು ಕ್ರೀಡೆಯಲ್ಲಿ ಸಾಧನೆ ತೋರಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಸಲಹೆ ಮಾಡಿದರು.
ನೆಹರೂ ಯುವ ಕೇಂದ್ರ ಹಾಗೂ ಈಶ್ವರಿ ಮಹಿಳಾ ಮಂಡಳ ವತಿಯಿಂದ ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬ್ಲಾಕ್‍ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಗೆ ಉತ್ತೇಜನ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ವಿಪುಲ ಅವಕಾಶಗಳು ಇವೆ ಎಂದು ಉದ್ಘಾಟನೆ ಮಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ನುಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಬುದ್ಧಿಶಕ್ತಿ ಕೂಡ ಚುರುಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ರೋಗಗಳಿಂದ ದೂರ ಇರಬಹುದು ಎಂದು ತಾಲ್ಲೂಕು ಪಂಚಾಯಿತಿಯ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ ಎಸ್.ಗಡ್ಡಿ ತಿಳಿಸಿದರು.
ಆರೋಗ್ಯ ವೃದ್ಧಿಗೆ ಪೂರಕವಾಗಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರು.
ದೇಸಿ ಕ್ರೀಡೆಗಳಿಗೆ ಉತ್ತೇಜನ ಕೊಡಲು ಹಾಗೂ ವಿದ್ಯಾರ್ಥಿಗಳಲ್ಲಿ ಕ್ರೀಡಾ ಆಸಕ್ತಿ ಬೆಳೆಸಲು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರಮೆ ನುಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಚಾರ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶೇಖ್ ಯಾದುಲ್ಲಾ, ಮುಖಂಡ ಸಿದ್ದಪ್ಪ ಫುಲಾರಿ, ಪ್ರೊ. ಸಂತೋಷ ಎಖ್ಖೆಳ್ಳೆ, ಪ್ರೊ. ನಾಗಪ್ಪ ಜಿವಣಗೆ, ಪ್ರೊ. ವಿ.ಕೆ. ಪಾಂಚಾಳ, ದೈಹಿಕ ಶಿಕ್ಷಕ ಎ.ಕೆ. ಜೋಶಿ, ಧನರಾಜ ಫುಲಾರಿ, ಪ್ರೊ. ಬಸವರಾಜ, ವಿವೇಕ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ ಸ್ವಾಗತಿಸಿದರು. ಪ್ರೊ. ಸಿದ್ದಲಿಂಗ ಎಸ್ ನಿರೂಪಿಸಿದರು. ಪ್ರೊ. ಪ್ರೀತಿಸ್ ವಂದಿಸಿದರು.
ವಾಲಿಬಾಲ್, ಕಬಡ್ಡಿ, ಕೊಕ್ಕೋ, ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತಿತರ ಸ್ಪರ್ಧೆಗಳು ನಡೆದವು. ವಿವಿಧ ಯುವಕ ಹಾಗೂ ಕ್ರೀಡಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.