ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅಗತ್ಯ

ಕಲಬುರಗಿ: ಆ.29:ಯಾವುದೇ ರಾಷ್ಟ್ರದಲ್ಲಿ ಕ್ರೀಡಾ ಕ್ಷೇತ್ರ ಬೆಳವಣಿಗೆಯಾಗಬೇಕಾದರೆ, ಅಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಸೂಕ್ತವಾದ ಪ್ರೋತ್ಸಾಹ ನೀಡಿದರೆ ಮಾತ್ರ ಕ್ರೀಡಾ ಕೇತ್ರ, ಕ್ರೀಡಾಪಟುಗಳು ಬೆಳವಣಿಗೆ ಹೊಂದುವುದರ ಮೂಲಕ ದೇಶದ ಕೀರ್ತಿ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ ಎಂದು ಜೇವರ್ಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ ಮಾರ್ಮಿಕವಾಗಿ ಅಭಿಪ್ರಾಯಪಟ್ಟರು.

     ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಬುರಗಿಯ 'ಬಸವೇಶ್ವರ ಸಮಾಜ ಸೇವಾ ಬಳಗ'ದ ಸಹಯೋಗದೊಂದಿಗೆ ಮಂಗಳವಾರ ಜರುಗಿದ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ'ಯನ್ನು ಉದ್ಘಾಟಿಸಿ ಮಾತನಾಡಿದರು.
  ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಕ್ರೀಡೆಯಲ್ಲಿ ದೊಡ್ಡದು-ಸಣ್ಣದು ಎಂಬುದಿಲ್ಲ. ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ, ಅದರ ನೀತಿ-ನಿಯಮಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು, ಪೂರ್ವಸಿದ್ಧತೆಯೊಂದಿಗೆ ತೊಡಗಬೇಕು. ದೊರೆತ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡುವುದರೊಂದಿಗೆ ನಮ್ಮ ಭಾಗ ಕಡಿಮೆಯಿಲ್ಲವೆಂದು ತೋರಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಹಾಕಿ ಕ್ಷೇತ್ರದ ಮೂಲಕ ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಧ್ಯಾನಚಂದ್‍ರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ದೈಹಿಕ ಶಿಕ್ಷಕಿ ಶಾಂತಮ್ಮ, ಶಿಕ್ಷಕರಾದ ರಮೇಶ ಖಾನಾಪುರೆ, ದಯಾನಂದ ಹಿರೇಮಠ, ಇರ್ಫಾನ್ ಬೇಗಂ, ತನುಜಾರಾಣಿ, ರೇಣುಕಾ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.